ಅದಾನಿ ವಿವಾದ ವಿಚಾರದಲ್ಲಿ ಕೇಂದ್ರವನ್ನು ಮುಜುಗರಕ್ಕೀಡು ಮಾಡಲು ವಿಪಕ್ಷಗಳಿಂದ ಜೆಪಿಸಿ ಬೇಡಿಕೆ : ಹರೀಶ್ ಸಾಳ್ವೆ
ಹೊಸದಿಲ್ಲಿ: ಅದಾನಿ ಗ್ರೂಪ್-ಹಿಂಡೆನ್‌ಬರ್ಗ್ ರಿಸರ್ಚ್ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಅವಕಾಶ ನೀಡಬೇಕೆಂಬ ಕೆಲವು ವಿರೋಧ ಪಕ್ಷಗಳ ಬೇಡಿಕೆಗಳು ಕೇವಲ ಸರಕಾರವನ್ನು ಮುಜುಗರಕ್ಕೀಡು ಮಾಡುವುದಾಗಿದೆ ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಇಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಆರು ತಜ್ಞರನ್ನೊಳಗೊಂಡ ಸಮಿತಿಯನ್ನು ಸ್ಥಾಪಿಸಲು ಸುಪ್ರೀಂ ಕೋರ್ಟ್‌ನ ಆದೇಶವು ಉತ್ತಮ ಆಯ್ಕೆಯಾಗಿದೆ ಹಾಗೂ ಹೂಡಿಕೆದಾರರ ನಂಬಿಕೆಯನ್ನು ಒಳಗೊಂಡಿರುವ ಕಾರಣ ತಜ್ಞರ ತನಿಖೆಯು ಕಾಲಮಿತಿಯಾಗಿರಬೇಕು ಎಂದು ಅವರು ಹೇಳಿದರು.
"ಇದು ನಿರ್ಣಾಯಕವಾಗಿದೆ. ಈ ತನಿಖೆಯು ಸಮಯಕ್ಕೆ ಬದ್ಧವಾಗಿದೆ. ಏಕೆಂದರೆ ಹೂಡಿಕೆದಾರರ ವಿಶ್ವಾಸವು ದುರ್ಬಲವಾಗಿದೆ. ಅಂತಹ ಮಾರುಕಟ್ಟೆಯ ಏರಿಳಿತದ ಘಟನೆಗಳಿಂದ ಹೂಡಿಕೆದಾರರ ಭಾವನೆ ಹಾನಿಗೊಳಗಾಗಿದೆ ಹಾಗೂ ಅದನ್ನು ಸರಿಪಡಿಸಲು ನಿಖರವಾಗಿ ಏನಾಯಿತು ಎಂಬುದನ್ನು ನಾವು ತ್ವರಿತವಾಗಿ ತಿಳಿದುಕೊಳ್ಳಬೇಕಾಗಿದೆ’’ ಎಂದು ಸಾಳ್ವೆ NDTV ಗೆ ತಿಳಿಸಿದರು.
ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಅವರ ಆರೋಪಗಳಿಂದ ತತ್ತರಿಸಿರುವ ಅದಾನಿ ಗ್ರೂಪ್ ಸಂಸ್ಥೆಗಳ ಷೇರು ಕುಸಿತದಿಂದ ಉದ್ಭವಿಸುವ ಸಮಸ್ಯೆಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿನ್ನೆ ಆರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ.
ಸಮಿತಿಯ ರಚನೆಯನ್ನು ಸ್ವಾಗತಿಸಿದ ಸಾಳ್ವೆ, ಅದಾನಿ-ಹಿಂಡೆನ್‌ಬರ್ಗ್ ವಿವಾದ ಕೆಲವು ಸಂಕೀರ್ಣ ಆರ್ಥಿಕ ವಿಷಯಗಳನ್ನು ಒಳಗೊಂಡಿರುತ್ತದೆ, ಅದನ್ನು ವಿಷಯ ತಜ್ಞರು ಮಾತ್ರ ನಿಭಾಯಿಸಬಹುದು ಎಂದರು.