ಇಂದು ಸಿಬಿಐ ನ್ಯಾಯಾಲಯದಿಂದ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ
ಹೊಸದಿಲ್ಲಿ: ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಇಂದು ಮಧ್ಯಾಹ್ನ 2 ಗಂಟೆಗೆ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ದಿಲ್ಲಿ ಮದ್ಯ ನೀತಿ ಜಾರಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ವಶದಲ್ಲಿರುವ ಹಾಗೂ ತನಿಖೆಗೆ ಒಳಗಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಕೋರಿರುವ ಅರ್ಜಿ ಇಂದು ಮಧ್ಯಾಹ್ನ ವಿಚಾರಣೆಗೆ ಬರಲಿದೆ.
ಸಿಸೋಡಿಯಾ ಅವರು ರಾಷ್ಟ್ರ ರಾಜಧಾನಿಗೆ ಮದ್ಯದ ನೀತಿಯನ್ನು ರೂಪಿಸುವ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ನೀಡಿದ ನಂತರ ಮದ್ಯ ನೀತಿಯನ್ನು ರದ್ದುಗೊಳಿಸಲಾಯಿತು.
2021-22ಕ್ಕೆ ಈಗ ರದ್ದಾದ ಮದ್ಯ ನೀತಿಯ ರಚನೆ ಹಾಗೂ ಅನುಷ್ಠಾನದಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ 51 ವರ್ಷದ ಸಿಸೋಡಿಯಾರನ್ನು ರವಿವಾರ ಸಂಜೆ ಸಿಬಿಐ ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಪ್ ನ ಇನ್ನೊಬ್ಬ ನಾಯಕ ಸತ್ಯೇಂದ್ರ ಜೈನ್ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಅವರು ಮಂಗಳವಾರ ದಿಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ