ಇತರ ರಾಜ್ಯಗಳ ವಲಸೆ ಕಾರ್ಮಿಕರನ್ನು ರಕ್ಷಿಸುತ್ತೇವೆ: ತಮಿಳುನಾಡು ಸಿಎಂ ಸ್ಟಾಲಿನ್ ಪ್ರತಿಜ್ಞೆ

ಬಿಹಾರದ ಜನತೆಯ ಮೇಲೆ ಉದ್ದೇಶಿತ ದಾಳಿಯ ವರದಿಗಳನ್ನು ನಕಲಿ ಎಂದ ಅಧಿಕಾರಿಗಳು

Update: 2023-03-04 09:32 GMT

ಹೊಸದಿಲ್ಲಿ: ಬಿಹಾರದ ಜನತೆಯ ಮೇಲೆ ಉದ್ದೇಶಿತ ದಾಳಿಯ ವರದಿಗಳನ್ನು ನಕಲಿ ಎಂದು ಅಧಿಕಾರಿಗಳು ತಳ್ಳಿ ಹಾಕಿರುವ ಮಧ್ಯೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇತರ ರಾಜ್ಯಗಳ ವಲಸೆ ಕಾರ್ಮಿಕರನ್ನು ರಕ್ಷಿಸುವುದಾಗಿ ಶನಿವಾರ ಪ್ರತಿಜ್ಞೆ ಮಾಡಿದ್ದಾರೆ.

"ವಲಸೆ ಕಾರ್ಮಿಕರು ಭಯಪಡುವ ಅಗತ್ಯವಿಲ್ಲ, ಯಾರಾದರೂ ನಿಮಗೆ ಬೆದರಿಕೆ ಹಾಕಿದರೆ ಸಹಾಯವಾಣಿಗೆ ಕರೆ ಮಾಡಿ. ತಮಿಳುನಾಡು ಸರಕಾರ ಮತ್ತು ಜನರು ನಮ್ಮ ವಲಸೆ ಸಹೋದರರನ್ನು ರಕ್ಷಿಸಲು ನಿಲ್ಲುತ್ತಾರೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ರಾಜ್ಯದಲ್ಲಿ ಬಿಹಾರದಿಂದ ವಲಸೆ ಬಂದ ಕಾರ್ಮಿಕರ ಮೇಲೆ ದಾಳಿಗಳ ಬಗ್ಗೆ ವದಂತಿಗಳನ್ನು ಹರಡದಂತೆ ತಮಿಳುನಾಡು ಹಾಗೂ  ಬಿಹಾರ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ, ಇದು ಕಾರ್ಮಿಕರಲ್ಲಿ ಭೀತಿಗೆ ಕಾರಣವಾಯಿತು ಹಾಗೂ ಬಿಹಾರ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗಿದೆ.

ಬಿಹಾರದ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ವಲಸೆ ಕಾರ್ಮಿಕರನ್ನು ಭೇಟಿಯಾಗಲಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕಚೇರಿಯ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಬಿಹಾರದಿಂದ ವಲಸೆ ಬಂದ ಕಾರ್ಮಿಕರ ಮೇಲಿನ ದಾಳಿಯ ಬಗ್ಗೆ ವದಂತಿಗಳನ್ನು ಪರಿಶೀಲಿಸಲು ಎರಡೂ ರಾಜ್ಯಗಳ ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ನಿಕಟವಾಗಿ ಕಣ್ಣಿಟ್ಟಿದ್ದಾರೆ. ವಾಟ್ಸಾಪ್‌ನಲ್ಲಿ ನಕಲಿ ಸಂದೇಶಗಳು ಫಾರ್ವರ್ಡ್ ಆಗುತ್ತಿರುವುದು ಭೀತಿಯ ಹಿಂದೆ ಇದ್ದಂತೆ ತೋರುತ್ತಿದೆ.

ವಲಸೆ ಕಾರ್ಮಿಕರು ಭಯಪಡಬೇಡಿ ಎಂದು ತಮಿಳುನಾಡಿನ ಜಿಲ್ಲಾಧಿಕಾರಿಗಳು ಹಿಂದಿಯಲ್ಲಿ ಮನವಿ ಮಾಡಿದ್ದಾರೆ.

Similar News