ಕುಂಜಿಬೆಟ್ಟುವಿನ ಸುಸ್ಥಿತಿಯಲ್ಲಿದ್ದ ರಸ್ತೆ ಅಗೆತ: ತೀವ್ರ ಆಕ್ರೋಶ
ಉಡುಪಿ: ನಗರದ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದಿಂದ ಬೀಡಿನಗುಡ್ಡೆ ಸಂಪರ್ಕಿಸುವ ಸುವ್ಯವಸ್ಥೆ ಯಲ್ಲಿದ್ದ ಮುಖ್ಯ ಕಾಂಕ್ರೀಟ್ ರಸ್ತೆಯನ್ನು ಕಾಮಗಾರಿಯ ನೆಪದಲ್ಲಿ ಅಗೆಯುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹತ್ತಿಂಚು ದಪ್ಪ, ಕಬ್ಬಿಣದ ಸರಳು ಅಳವಡಿಸಿ, ಕೆಲವು ಸಮಯದ ಹಿಂದೆ ಹೊಸದಾಗಿ ನಿರ್ಮಾಣ ಮಾಡಿರುವ ಕಾಂಕ್ರೀಟ್ ರಸ್ತೆ ಇದಾಗಿದ್ದು, ಸುವ್ಯವಸ್ಥೆ ಯಲ್ಲಿದ್ದ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆಯನ್ನು ಇದೀಗ ಅಗೆಯಲಾಗು ತ್ತಿದೆ. ಯಾವುದೇ ಹೊಂಡಗುಂಡಿಗಳಿಲ್ಲದೆ ಸುಸ್ಥಿತಿಯಲ್ಲಿದ್ದ ಈ ರಸ್ತೆ ಮತ್ತಷ್ಟು ವರ್ಷಗಳು ಬಾಳಿಕೆ ಬರುವಂತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಂತಹ ರಸ್ತೆಯನ್ನು ವಿನಾಕಾರಣ ಅಗೆದು, ಹೊಸದಾಗಿ ಕಳಪೆ ಗುಣಮಟ್ಟ ದಲ್ಲಿ ರಸ್ತೆಯನ್ನು ನಿರ್ಮಾಣ ಮಾಡುತ್ತಿ ರುವುದು ಖಂಡನೀಯ. ಕಳೆದ ಎಂಟು ತಿಂಗಳ ಹಿಂದೆಯಷ್ಟೆ ನಿರ್ಮಾಣ ಮಾಡಿರುವ ರಸ್ತೆಯನ್ನು ಅಗೆದು ಹಾಳು ಗೆಡವಲಾಗಿದೆ. ಈ ರೀತಿ ಸಾರ್ವಜನಿಕರ ಹಣವನ್ನು ವ್ಯರ್ಥಗೊಳಿಸುವ ಕುಕೃತ್ಯ ಆಡಳಿತ ವ್ಯವಸ್ಥೆಗಳಿಂದ ನಡೆಯುತ್ತಿದೆ. ಆದಷ್ಟು ಬೇಗ ಕಾಮಗಾರಿಯನ್ನು ಸ್ಥಗಿತ ಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.