ಇರಾನಿ ಕಪ್: ಒಂದೇ ಪಂದ್ಯದಲ್ಲಿ ದ್ವಿಶತಕ, ಶತಕ ಗಳಿಸಿ ಹೊಸ ದಾಖಲೆ ನಿರ್ಮಿಸಿದ ಯಶಸ್ವಿ ಜೈಸ್ವಾಲ್
ಹೊಸದಿಲ್ಲಿ, ಮಾ.4:ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುತ್ತಿರುವ ಇರಾನಿ ಕಪ್‌ನಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಯಶಸ್ವಿ ಜೈಸ್ವಾಲ್ ಶೇಷ ಭಾರತ ತಂಡದ ಪರ ಮತ್ತೊಂದು ಶತಕ (144 ರನ್, 157 ಎಸೆತ, 16 ಬೌಂಡರಿ, 3 ಸಿಕ್ಸರ್) ಸಿಡಿಸಿದ್ದಾರೆ. ಈ ಮೂಲಕ ಇರಾನಿ ಕಪ್‌ನಲ್ಲಿ ದ್ವಿಶತಕ ಹಾಗೂ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡು ಹೊಸ ದಾಖಲೆ ನಿರ್ಮಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ(213 ರನ್, 259 ಎಸೆತ)ಸಿಡಿಸಿದ್ದ ಮುಂಬೈ ಬ್ಯಾಟರ್ ಜೈಸ್ವಾಲ್ ಉತ್ತಮ ಪ್ರದರ್ಶನ ಮುಂದುವರಿಸಿ 4ನೇ ದಿನದಾಟವಾದ ಶನಿವಾರ ಭರ್ಜರಿ ಶತಕ ಸಿಡಿಸಿದರು. ಜೈಸ್ವಾಲ್ ಅವರು ಇರಾನಿ ಕಪ್‌ನ ಒಂದೇ ಆವೃತ್ತಿಯಲ್ಲಿ ಗರಿಷ್ಠ ರನ್ ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದು, ಶಿಖರ್ ಧವನ್ ದಾಖಲೆ ಮುರಿದರು. 2012-13ರ ಆವೃತ್ತಿಯಲ್ಲಿ ಧವನ್ 332 ರನ್ ಗಳಿಸಿದ್ದರು. ಆಫ್ ಸ್ಪಿನ್ನರ್ ಸರನ್ಶ್ ಜೈನ್‌ಗೆ 144 ರನ್‌ಗೆ ವಿಕೆಟ್ ಒಪ್ಪಿಸಿದ ಜೈಸ್ವಾಲ್ ಒಟ್ಟು 357 ರನ್ ಗಳಿಸಿದ್ದಾರೆ.
ಒಟ್ಟಾರೆ ಜೈಸ್ವಾಲ್ ಅವರು ಪ್ರಥಮ ದರ್ಜೆ ಕ್ರಿಕೆಟಿನ ಒಂದೇ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಗಳಿಸಿದ ಭಾರತದ 12ನೇ ಆಟಗಾರ ಎನಿಸಿಕೊಂಡಿದ್ದಾರೆ. ಕೆ.ಎಸ್.ದುಲೀಪ್‌ಸಿನ್ಹಾಜಿ 1929ರಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು. ಇಂಗ್ಲೆಂಡ್‌ನಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸಸ್ಸೆಕ್ಸ್ ಪರ ಆಡುವಾಗ ಈ ಸಾಧನೆ ಮಾಡಿದ್ದರು.
ಸುನೀಲ್ ಗವಾಸ್ಕರ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ಜೈಸ್ವಾಲ್ ಇರಾನಿ ಕಪ್‌ನ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತದ 10ನೇ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು.