ದೈನಿಕ್ ಭಾಸ್ಕರ್, ಬಿಜೆಪಿ ವಕ್ತಾರನ ವಿರುದ್ಧ ಪ್ರಕರಣ ದಾಖಲಿಸಿದ ತಮಿಳುನಾಡು ಪೊಲಿಸರು
ವಲಸಿಗರ ಮೇಲಿನ ಹಲ್ಲೆ ಬಗ್ಗೆ ತಪ್ಪು ಮಾಹಿತಿ
ಹೊಸದಿಲ್ಲಿ: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ದೈನಿಕ್ ಭಾಸ್ಕರ್, 'ತನ್ವೀರ್ ಪೋಸ್ಟ್' ಎಂಬ ಟ್ವಿಟರ್ ಹ್ಯಾಂಡಲ್ ಮತ್ತು ಬಿಜೆಪಿ ವಕ್ತಾರ ಪ್ರಶಾಂತ್ ಪಟೇಲ್ ಉಮ್ರಾವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಿರುಪ್ಪೂರ್ ಉತ್ತರ ಪೊಲೀಸ್ ಠಾಣೆಯು ದೈನಿಕ್ ಭಾಸ್ಕರ್ ಸಂಪಾದಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (ಐ) (ಬಿ) (ಸಾರ್ವಜನಿಕರಿಗೆ ಭಯ ಅಥವಾ ಬೆದರಿಕೆ ಉಂಟುಮಾಡುವ ಉದ್ದೇಶ) ಅಡಿಯಲ್ಲಿ ಆರೋಪ ಹೊರಿಸಿದೆ. ತಿರುಪ್ಪೂರ್ ಸೈಬರ್ ಕ್ರೈಂ ಪೊಲೀಸರು ಮಹಮ್ಮದ್ ತನ್ವೀರ್ ಎಂಬಾತನ ವಿರುದ್ಧ ಅದೇ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 56 (ಡಿ) ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ತೂತುಕುಡಿ ಸೆಂಟ್ರಲ್ ಪೊಲೀಸರು ಬಿಜೆಪಿ ವಕ್ತಾರ ಪ್ರಶಾಂತ್ ಪಟೇಲ್ ಉಮ್ರಾವ್ ವಿರುದ್ಧ ಐಪಿಸಿ ಸೆಕ್ಷನ್ 153 (ಗಲಭೆ ಮಾಡುವ ಉದ್ದೇಶದಿಂದ ಪ್ರಚೋದನೆ), 153 ಎ, 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಮತ್ತು 505 (ಸಾರ್ವಜನಿಕ ದೌರ್ಜನ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
15 ಬಿಹಾರಿ ವಲಸೆ ಕಾರ್ಮಿಕರು ತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿರುವುದಾಗಿ ದೈನಿಕ್ ಭಾಸ್ಕರ್ ವರದಿ ಮಾಡಿತ್ತು. ಕೇವಲ ಹಿಂದಿ ಮಾತನಾಡುವ ಕಾರಣಕ್ಕಾಗಿ ತಮಿಳುನಾಡಿನಲ್ಲಿ ಬಿಹಾರಿಗಳು "ತಾಲಿಬಾನ್ ಮಾದರಿಯ" ದಾಳಿಗಳನ್ನು ಎದುರಿಸುತ್ತಿದ್ದಾರೆ ಎಂದು ಅದು ವರದಿಯಲ್ಲಿ ಹೇಳಿತ್ತು. ಹಿಂದಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ಹಲವಾರು ದಾಳಿಗಳು ನಡೆದಿವೆ ಎಂದು ಉಮ್ರಾವ್ ಕೂಡ ಹೇಳಿದ್ದರು. ಆದರೆ, ಅದಕ್ಕೆ ಸಂಬಂಧವೇ ಪಡದ ವಿಡಿಯೋಗಳನ್ನು ಅವರು ಟ್ವಿಟರ್ನಲ್ಲಿ ಹಂಚಿದ್ದಾರೆ ಎಂದು ತಮಿಳುನಾಡು ಪೊಲೀಸ್ ಮೂಲಗಳು ಹೇಳಿವೆ.
ಒಬ್ಬ ವ್ಯಕ್ತಿಯು ರೈಲಿನಲ್ಲಿ ಹಿಂದಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉತ್ತರ ಭಾರತ ಮೂಲದ ಕಾರ್ಮಿಕರ ವಲಸೆಯಿಂದಾಗಿ ತಮಿಳುನಾಡಿನ ಸ್ಥಳೀಯರಿಗೆ ಉದ್ಯೋಗಾವಕಾಶಗಳ ನಷ್ಟವಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಹಿಂದಿ ಭಾಷಿಕ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಬಳಿಕ ಸರ್ಕಾರಿ ರೈಲ್ವೆ ಪೊಲೀಸರು ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ.
ಈ ಒಂದು ಘಟನೆಯ ಆಧಾರದಲ್ಲಿ, ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ಹಲ್ಲೆಗಳ ಬಗ್ಗೆ ತಪ್ಪು ಮಾಹಿತಿಯು ಹೆಚ್ಚುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಈ ರೀತಿಯ ಹಲವಾರು ತಪ್ಪು ಮಾಹಿತಿಯ ವರದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ವಿಷಯವನ್ನು ಪರಿಶೀಲಿಸಲು ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಸೈಲೇಂದ್ರ ಬಾಬು ಬಿಹಾರ ಡಿಜಿಪಿ ಜತೆ ಚರ್ಚೆ ನಡೆಸಿದ್ದು, ಅಂತಹ ಯಾವುದೇ ಹಿಂಸಾಚಾರ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
“ಕೆಲವು ಹಳೆಯ ವೈಯಕ್ತಿಕ ವಿವಾದಗಳ ವೀಡಿಯೋಗಳನ್ನು ಬಿಹಾರದ ನಾಗರಿಕರ ವಿರುದ್ಧ ನಡೆದ ಹಲ್ಲೆ ವಿಡಿಯೋ ಎಂದು ಪ್ರಕಟಿಸಲಾಗುತ್ತಿದೆ. ತಮಿಳುನಾಡು ಪೊಲೀಸರು ಕಠಿಣ ಕ್ರಮ ಕೈಗೊಂಡು ತಮಿಳುನಾಡಿನಲ್ಲಿರುವ ಬಿಹಾರ ಮೂಲ ನಿವಾಸಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ,'' ಎಂದು ಬಿಹಾರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಗಂಗ್ವಾರ್ ಹೇಳಿದ್ದಾರೆ.
ತಮಿಳುನಾಡು ಡಿಜಿಪಿ ಸೈಲೇಂದ್ರ ಬಾಬು ಈ ವಾರದ ಆರಂಭದಲ್ಲಿಯೂ ಹೇಳಿಕೆ ನೀಡಿದ್ದು, ವಲಸೆ ಕಾರ್ಮಿಕರ ಮೇಲೆ ದಾಳಿ ನಡೆದಿಲ್ಲ ಎಂದು ಹೇಳಿದ್ದಾರೆ.
“ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೊಗಳು ನಾಲ್ಕು ತಿಂಗಳ ಹಳೆಯವು ಮತ್ತು ಬಿಹಾರ ಮತ್ತು ಜಾರ್ಖಂಡ್‌ಗೆ ಸೇರಿದ ವಲಸೆ ಕಾರ್ಮಿಕರ ನಡುವಿನ ಘರ್ಷಣೆಯ ವಿಡಿಯೋ ಅದು. ಇನ್ನೊಂದು ಕೊಯಮತ್ತೂರಿನಲ್ಲಿ ಕಳೆದ ತಿಂಗಳು ನ್ಯಾಯಾಲಯದ ಸಂಕೀರ್ಣದ ಹೊರಗೆ ನಡೆದ ಕೊಲೆಯ ವೀಡಿಯೊ. ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಯಾವುದೇ ದಾಳಿ ನಡೆದಿಲ್ಲ” ಎಂದು ಬಾಬು ದಿ ನ್ಯೂಸ್ ಮಿನಿಟ್‌ಗೆ ತಿಳಿಸಿದ್ದಾರೆ.