ಅದಾನಿ ಸಮೂಹಕ್ಕೆ ಏಕಸ್ವಾಮ್ಯ ನೀಡಿ, ಗ್ರಾಹಕರ ಸುಲಿಗೆ ಮಾಡಲು ಅವಕಾಶ ನೀಡಿದ ಸರ್ಕಾರ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ: ಅದಾನಿ ಸಮೂಹಕ್ಕೆ ಕೇಂದ್ರ ಸರ್ಕಾರವು ಏಕಸ್ವಾಮ್ಯ ನೀಡಿದ್ದು, ಅಗತ್ಯ ಮೂಲಭೂತ ಸೌಕರ್ಯಗಳಾದ ವಿಮಾನ ನಿಲ್ದಾಣ ಹಾಗೂ ವಿದ್ಯುಚ್ಛಕ್ತಿಯಂತಹ ಸೇವೆಗಳನ್ನು ಬಳಸುವ ಗ್ರಾಹಕರ ಸುಲಿಗೆಗೆ ಅವಕಾಶ ಒದಗಿಸಿದೆ ಎಂದು ಕಾಂಗ್ರೆಸ್ ಪಕ್ಷವು ಶನಿವಾರ ಆರೋಪಿಸಿದೆ ಎಂದು indianexpress.com ವರದಿ ಮಾಡಿದೆ.
ಅದಾನಿ ಸಮೂಹದ ಅಕ್ರಮದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂದು ನಿರಂತರವಾಗಿ ಆಗ್ರಹಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿಗೆ ಮುಜುಗರ ಉಂಟು ಮಾಡಲಲ್ಲ; ಬದಲಿಗೆ ಆ ಅಕ್ರಮದ ಸಂಪೂರ್ಣ ಆಯಾಮಗಳನ್ನು ಬಯಲು ಮಾಡಲು ಎಂದೂ ವಿರೋಧ ಪಕ್ಷವಾದ ಕಾಂಗ್ರೆಸ್ ಪ್ರತಿಪಾದಿಸಿದೆ.
ಕಾಂಗ್ರೆಸ್ ಪಕ್ಷದ "ನಾವು ಅದಾನಿಗೆ ಏನಾಗಿದ್ದೇವೆ?" ಎಂಬ ಸರಣಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದು, ಅದಾನಿ ಸಮೂಹಕ್ಕೆ ನೀಡಿರುವ ಏಕಸ್ವಾಮ್ಯದಿಂದ ಹೇಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ವಿಮಾನ ನಿಲ್ದಾಣ ಹಾಗೂ ವಿದ್ಯುಚ್ಛಕ್ತಿ ಬಳಕೆಯಲ್ಲಿ ಗ್ರಾಹಕರನ್ನು ಸುಲಿಗೆ ಮಾಡಲಾಗುತ್ತಿದೆ ಎಂಬುದರ ಕುರಿತು ಗಮನ ಸೆಳೆಯುವುದು ಈ ಸರಣಿಯ ಉದ್ದೇಶ ಎಂದು ಹೇಳಿದ್ದಾರೆ.
ಪ್ರಧಾನಿಯನ್ನುದ್ದೇಶಿ ಬಿಡುಗಡೆ ಮಾಡಿರುವ ತಮ್ಮ ಹೇಳಿಕೆಯಲ್ಲಿ ಭಾರತದ 11ನೇ ಜನನಿಬಿಡ ವಿಮಾನ ನಿಲ್ದಾಣವಾದ, ಅದಾನಿ ನಿರ್ವಹಿಸುತ್ತಿರುವ ಲಕ್ನೊದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು ದುಬಾರಿ ಏರಿಕೆ ಮಾಡುವ ಪ್ರಸ್ತಾಪ ಸಲ್ಲಿಸಲಾಗಿದೆ. ಈ ಪ್ರಸ್ತಾವವನ್ನೇನಾದರೂ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು ಅನುಮೋದಿಸಿದರೆ, 2025-26ನೇ ಸಾಲಿನಿಂದ ದೇಶೀಯ ಬಳಕೆದಾರರ ಶುಲ್ಕ ರೂ. 192ರಿಂದ ರೂ. 1025 ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಶುಲ್ಕ ರೂ. 561ರಿಂದ ರೂ. 2,756ಕ್ಕೆ ಏರಿಕೆಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
2008ರಲ್ಲಿ ಅದಾನಿ ಪವರ್ ಹರ್ಯಾಣ ರಾಜ್ಯ ಸರ್ಕಾರದೊಂದಿಗೆ ಪ್ರತಿ ಯೂನಿಟ್‌ಗೆ ರೂ. 2.94ರ ದರದಲ್ಲಿ 1,424 ಮೆ.ವ್ಯಾ. ವಿದ್ಯುತ್ತನ್ನು 25 ವರ್ಷಗಳ ಅವಧಿಗೆ ಪೂರೈಕೆ ಮಾಡುವ ಇಂಧನ ಖರೀದಿ ಒಪ್ಪಂದಕ್ಕೆ ಸಹಿ ಮಾಡಿತ್ತು. ಆದರೆ, ತನ್ನ ಇಂಧನ ಪೂರೈಕೆ ಕರಾರನ್ನು ಮುರಿದ ಅದಾನಿ ಪವರ್, ದಿಢೀರ್ ವಿದ್ಯುತ್ತನ್ನು ಪ್ರತಿ ಯೂನಿಟ್‌ಗೆ ರೂ. 11.55 ತೆತ್ತು ಖರೀದಿ ಮಾಡುವಂತಹ ಒತ್ತಡವನ್ನು ಹರ್ಯಾಣ ಸರ್ಕಾರಕ್ಕೆ ಸೃಷ್ಟಿಸಿದೆ ಎಂದೂ ಪ್ರತಿಪಾದಿಸಿದ್ದಾರೆ.
ಅಮೆರಿಕಾ ಮೂಲದ ಕಿರು ಅವಧಿಯ ಖರೀದಿ ಸಂಸ್ಥೆಯಾದ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯು ಅದಾನಿ ಸಮೂಹದ ವಿರುದ್ಧ ಶೇರು ಅವ್ಯವಹಾರದ ಆರೋಪ ಮಾಡಿದಾಗಿನಿಂದ, ಅದರ ಶೇರು ಬೆಲೆ ಪ್ರಪಾತಕ್ಕೆ ಜಾರಿದೆ. ಅಂದಿನಿಂದ ಕಾಂಗ್ರೆಸ್ ಪಕ್ಷ ಕೂಡಾ ನಿರಂತರವಾಗಿ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಪಟ್ಟು ಹಿಡಿದಿದೆ.
ಇದನ್ನೂ ಓದಿ: ಎ.1ರಿಂದ ಆರು ಅಂಕಿಗಳ ಹಾಲ್ಮಾರ್ಕ್ ಇಲ್ಲದ ಚಿನ್ನಾಭರಣಗಳ ಮಾರಾಟಕ್ಕೆ ನಿಷೇಧ