ಕಾಲೇಜು ಆವರಣದಲ್ಲಿ ಕುಸಿದು ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

Update: 2023-03-04 17:55 GMT

ಹೈದರಾಬಾದ್: ಗುಂಡ್ಲ ಪೋಚಂಪಲ್ಲಿ ಪುರಸಭೆ ವ್ಯಾಪ್ತಿಯಲ್ಲಿರುವ ಸಿಎಂಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿರುವ 18 ವರ್ಷದ ವಿದ್ಯಾರ್ಥಿಯೊಬ್ಬ ಹೃದಯ ಸ್ತಂಭನದಿಂದ ದಿಢೀರನೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದ್ದು, ಈ ವಿಡಿಯೊ ವೈರಲ್ ಆಗಿದೆ. 

ಮೃತಪಟ್ಟ ವಿದ್ಯಾರ್ಥಿಯನ್ನು ಸಚಿನ್ ಎಂದು ಗುರುತಿಸಲಾಗಿದ್ದು, ಸಿಎಂಆರ್ ಕಾಲೇಜು ಆವರಣದ ಕಾರಿಡಾರ್‌ನಲ್ಲಿ ನಡೆಯುತ್ತಿದ್ದ ಆತ ದಿಢೀರನೆ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ  ಸಂಭವಿಸಿದ ಘಟನೆಯ ವಿವರಗಳ ಪ್ರಕಾರ, ಸಚಿನ್ ಕುಸಿದು ಬಿದ್ದಾಗ, ಆತ ತನ್ನ ಗೆಳೆಯರೊಂದಿಗೆ ಹೆಜ್ಜೆ ಹಾಕುತ್ತಿದ್ದ ಎಂದು ಹೇಳಲಾಗಿದೆ. ಇದಲ್ಲದೆ ಘಟನೆಗೂ ಮುನ್ನ ಆತ ತರಗತಿಗೆ ಹಾಜರಾಗಿದ್ದ ಎಂದು ವರದಿಯಾಗಿದೆ.

ಸಚಿನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ ನಂತರ ರಾಜಸ್ಥಾನದ ಸುಚಿತ್ರ ನಿವಾಸಿಗಳಾದ ಆತನ ಪೋಷಕರಿಗೆ ಮಾಹಿತಿ ನೀಡಿ, ನಂತರ ಆತನ ಮೃತದೇಹವನ್ನು ಕಾಲೇಜು ಆಡಳಿತ ಮಂಡಳಿಯು ಅವರಿಗೆ ಹಸ್ತಾಂತರಿಸಿತು.

ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯ ಸ್ತಂಭನದಿಂದ ಸಾವಿಗೀಡಾಗುತ್ತಿರುವ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮುನ್ನ ಆದಿಲಾಬಾದ್ ಜಿಲ್ಲೆಯಲ್ಲಿ ನೃತ್ಯ ಮಾಡುತ್ತಿದ್ದ 19 ವರ್ಷ ವಯಸ್ಸಿನ ಯುವಕ ಮೃತಪಟ್ಟಿದ್ದ ಹಾಗೂ ಬ್ಯಾಡ್ಮಿಂಟನ್ ಆಡುತ್ತಿದ್ದ ಯುವಕನೊಬ್ಬ ದಿಢೀರನೆ ಕುಸಿದು ಬಿದ್ದು ಮೃತಪಟ್ಟಿದ್ದರು.

ಇದನ್ನೂ ಓದಿ: ‘ಕ್ರೈಸ್ತರಲ್ಲಿ  ಭಯದ ವಾತಾವರಣ’: ಮಾಜಿ ಸರಕಾರಿ ಅಧಿಕಾರಿಗಳಿಂದ ಪ್ರಧಾನಿಗೆ ಪತ್ರ

Similar News