ತನ್ನ ಆರಂಭದ ದಿನಗಳೆಡೆಗೆ ಮತ್ತೆ ಕೊಂಡೊಯ್ಯುವ ‘ದೂರದರ್ಶನ’

Update: 2023-03-05 08:15 GMT

ದೂರದರ್ಶನ. 70-80ರ ದಶಕದ ಅದ್ಭುತ. ದೂರದರ್ಶನ ಎನ್ನುವುದೇ ಆಗ ಒಂದು ವಿಸ್ಮಯ, ವಿಪರೀತ ಆಶ್ವರ್ಯಕರ ಮಾತು. ಹಳ್ಳಿ ಹಳ್ಳಿಗೂ ದೂರದರ್ಶನ ಎಂಟ್ರಿ ಕೊಟ್ಟಾಗಲಂತೂ ಜನ ಕುತೂಹಲದಿಂದ ಕಣ್ಣರಳಿಸಿ ನೋಡಿದರು. ಇದು ಹೇಗೆ ಸಾಧ್ಯ ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಂಡರು. ದೂರದರ್ಶನ ಎನ್ನುವ ಮಾಂತ್ರಿಕ ಪೆಟ್ಟಿಗೆ ಕೋಟಿ ಕೋಟಿ ಜನರ ಕನಸಾಗಿತ್ತು. ಈಗಂತೂ ಎಲ್ಲರ ಮನೆಯಲ್ಲೂ ಟಿವಿಗಳಿವೆ. ಆದರೆ ಆಗ ಹಾಗಿರಲಿಲ್ಲ. ಟಿವಿ ಇದ್ದವರ ಠೀವಿಯೇ ಬೇರೆ ಇರುತ್ತಿತ್ತು. ಪ್ರತಿಯೊಬ್ಬರೂ ದೂರದರ್ಶನದಲ್ಲಿ ಬರುವ ಕಾರ್ಯಕ್ರಮಗಳನ್ನು ನೋಡಲು ಚಾತಕಪಕ್ಷಿಯಂತೆ ಕಾದು ಕುಳಿತಿರುತ್ತಿದ್ದ ದಿನಗಳು ಆವಾಗಿದ್ದವು.

70ರ ದಶಕದಲ್ಲಿ ಹುಟ್ಟಿದ ದೂರದರ್ಶನ, ಆಗಿನ ಜನರ ಕಣ್ಣಿನಲ್ಲಿ ವಿಸ್ಮಯದ ಗೂಡಾಗಿತ್ತು. ದೂರದರ್ಶನ ಎಂಬ ಪದ ಕೇಳಿದ ತಕ್ಷಣ, ಎಂಥವರೂ ತಮ್ಮ ಬಾಲ್ಯದ ದಿನಗಳಿಗೆ ಒಮ್ಮೆ ಹೋಗಿ ಬರುತ್ತಾರೆ. ಆಗ ತಾವು ನೋಡುತ್ತಿದ್ದ ಕಾರ್ಯಕ್ರಮಗಳು, ಆ ಕಾರ್ಯಕ್ರಮಗಳ ತಾಕತ್ತು, ಅದಕ್ಕಾಗಿ ಅವರು ಪಡುತ್ತಿದ್ದ ಕಷ್ಟ ಎಲ್ಲವೂ ಕಣ್ಮುಂದೆ ಬರುತ್ತದೆ. ಅವೆಲ್ಲ ಅಂಶಗಳ ಜೊತೆ, ಟಿವಿ ಇಟ್ಟುಕೊಂಡಿದ್ದ ಮನೆಯ ಸದಸ್ಯರ ನಡವಳಿಕೆ ಇವೆಲ್ಲದರ ಸುತ್ತ ಸುತ್ತುವ ಕಥೆಯೇ ‘ದೂರದರ್ಶನ’ ಸಿನೆಮಾದ ಜೀವಾಳ.

ದೂರದರ್ಶನದಿಂದ ಒಂದು ರೀತಿಯಲ್ಲಿ ಕ್ರಾಂತಿಯೇ ನಡೆದುಹೋಯಿತು. ಜಗತ್ತಿನ ಮೂಲೆ ಮೂಲೆಯ ವಿಷಯಗಳು ಎಲ್ಲರಿಗೂ ತಿಳಿಯುವಂತಾದವು. ಮನರಂಜನೆಗೆ ಹೊಸ ಹುರುಪು ಬಂದಿತ್ತು. ಇವೆಲ್ಲದರ ಜೊತೆಗೆ ದೂರದರ್ಶನ ಮನುಷ್ಯ ಸಂಬಂಧಗಳನ್ನು ಕೆಲವೊಮ್ಮೆ ಬೆಸೆದರೆ, ಮತ್ತೊಮ್ಮೆ ದೂರಮಾಡಿತು. ಇಂಥ ಘಟನೆಗಳ ಸುತ್ತ ಸುತ್ತುವ ಸಿನೆಮಾ, ‘ದೂರದರ್ಶನ’. ವಾರಕ್ಕೊಮ್ಮೆ ಬರುವ ಚಿತ್ರಮಂಜರಿ, ರಾಮಾಯಣ, ಮಹಾಭಾರತ ಸೀರಿಯಲ್, ವಾರಕ್ಕೊಂದು ಸಿನೆಮಾ ಇವೆಲ್ಲವುಗಳ ನೆನಪು ಪ್ರೇಕ್ಷಕರನ್ನು ಕಾಡುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಇಲ್ಲಿ ಒಂದು ಕ್ಯೂಟ್ ಲವ್‌ಸ್ಟೋರಿ ಕೂಡ ಇದೆ. ಜೊತೆ ಜೊತೆಗೆ ದ್ವೇಷವೂ ಇದೆ. ದುರಾಸೆಪಡುವ ವ್ಯಕ್ತಿಯ ಮನಸ್ಥಿತಿಯೂ ಇದೆ. ದೂರದರ್ಶನ ಸಿನೆಮಾದ ನಾಯಕನಾಗಿ ನಟಿಸಿರುವ ಪೃಥ್ವಿ ಅಂಬರ್, ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೊತೆಗೆ ನಾಯಕಿಯಾಗಿ ನಟಿಸಿರುವ ಅಯಾನಾ ನಟನೆಯೂ ಮೆಚ್ಚುವಂಥದ್ದೆ. ಜೊತೆಗೆ ಸಾಥ್ ನೀಡಿರುವ ಹರಿಣಿ, ದೀಪಕ್, ಹುಲಿ ಕಾರ್ತಿಕ್, ಎಲ್ಲರೂ ಸಹಜಾಭಿನಯದಿಂದ ಗಮನ ಸೆಳೆಯುತ್ತಾರೆ. ಉಗ್ರಂ ಮಂಜು ವಿಲನ್ ಪಾತ್ರದಲ್ಲಿ ಉಗ್ರವಾಗೇ ನಟಿಸಿ, ಪ್ರೇಕ್ಷಕರಿಗೆ ಕಿಕ್ ಕೊಟ್ಟಿದ್ದಾರೆ.

ರೆಟ್ರೋ ಫೀಲ್ ಇರುವ ಈ ಸಿನೆಮಾದ ಬಹುತೇಕ ಚಿತ್ರೀಕರಣ ಮಲೆನಾಡ ಪರಿಸರದಲ್ಲೇ ನಡೆದಿದೆ. ಆದರೆ ತಾಂತ್ರಿಕವಾಗಿ ಮತ್ತು ಮೇಕಿಂಗ್ ವಿಷಯದಲ್ಲಿ ಇನ್ನೂ ಸ್ವಲ್ಪಗಮನ ಕೊಟ್ಟಿದ್ದರೆ ಸಿನೆಮಾದ ಕಳೆ ಇನ್ನೂ ಹೆಚ್ಚಾಗುತ್ತಿತ್ತು ಎಂಬ ಭಾವನೆ ಪ್ರೇಕ್ಷಕರಿಗೆ ಬರದೇ ಇರುವುದಿಲ್ಲ. ವಾಸುಕಿ ವೈಭವ್ ಸಂಗೀತ ಅಷ್ಟೊಂದು ಇಂಪ್ರೆಸ್ ಮಾಡುವುದಿಲ್ಲ. ಆದರೂ ಸಂಗೀತದಲ್ಲಿ ಒಂದು ಫೀಲ್ ಅಂತೂ ಇದ್ದೇ ಇದೆ. ರೆಟ್ರೋ ಸ್ಟೈಲ್, ದೂರದರ್ಶನದ ದಿನಗಳು ಮತ್ತೆ ಮತ್ತೆ ನೆನಪಾಗಬೇಕು ಅಂದರೆ ಒಮ್ಮೆ ದೂರದರ್ಶನ ಸಿನೆಮಾ ನೋಡಬೇಕು.ಜೊತೆಗೆ ಅನವಶ್ಯಕವಾಗಿ ಕೆಲವೊಂದಿಷ್ಟು ದೃಶ್ಯಗಳ ಸೇರ್ಪಡೆಯಾಗಿದೆ. ನಿರ್ದೇಶಕರು, ನಿರ್ದೇಶನದ ಕಡೆ ಇನ್ನೊಂದಿಷ್ಟು ಗಮನ ಹರಿಸಿದ್ದರೆ ಸಿನೆಮಾ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು. ಆದರೂ ಲಾಜಿಕ್ ಹುಡುಕದೆ ಸಿನೆಮಾ ನೋಡಬೇಕು ಎನ್ನುವ ಮೆಸೇಜ್ ಪ್ರೇಕ್ಷಕರಿಗೆ ತಲುಪಿದೆ.

Similar News