ಬಿಹಾರ ವಲಸಿಗರ ಮೇಲಿನ ದಾಳಿ ಬಗ್ಗೆ ವದಂತಿ: ಡಿಎಂಕೆ ಕಾರಣವೆಂದ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

Update: 2023-03-05 08:58 GMT

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ರಾಜ್ಯದಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಹಲ್ಲೆಗೆ ಆಡಳಿತಾರೂಢ ಡಿಎಂಕೆ ಪಕ್ಷವನ್ನು ಹೊಣೆಗಾರರನ್ನಾಗಿ ಮಾಡಿದ ಬೆನ್ನಲ್ಲೇ, ತಮಿಳುನಾಡು ಪೊಲೀಸರು ಅವರ ವಿರುದ್ಧ ಗುಂಪುಗಳ ನಡುವೆ ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಸೈಬರ್ ಕ್ರೈಂ ವಿಭಾಗವು ಅಣ್ಣಾಮಲೈ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಇತರ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿದೆ.

ಅಧಿಕಾರಿಗಳ ಪ್ರಕಾರ, ಘಟನೆಯ ಬಗ್ಗೆ ಬಿಜೆಪಿ ಬಿಹಾರ ಟ್ವಿಟರ್ ಖಾತೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.

ವಲಸೆ ಕಾರ್ಮಿಕರ ಸಮಸ್ಯೆಯ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದ ಅಣ್ಣಾಮಲೈ, ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಆದರೆ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ-ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅದರ ಮೈತ್ರಿ ಪಕ್ಷದ ನಾಯಕರು ಅವರ ಮೇಲಿನ ದ್ವೇಷಕ್ಕೆ ಕಾರಣವಾಗುತ್ತಿದ್ದಾರೆ ಎಂದು ಆರೋಪಿಸಿದ್ದರು. 
 
"ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ನಕಲಿ ಸುದ್ದಿಗಳನ್ನು ನೋಡುವುದು ನಿರಾಶಾದಾಯಕವಾಗಿದೆ. ನಾವು, ತಮಿಳು ಜನರು, "ಜಗತ್ತು ಒಂದೇ" ಎಂಬ ಪರಿಕಲ್ಪನೆಯನ್ನು ನಂಬುತ್ತೇವೆ. ನಾವು ಉತ್ತರದ ವಿರುದ್ಧ ಪ್ರತ್ಯೇಕತಾವಾದ ಮತ್ತು ಕೆಟ್ಟ ದ್ವೇಷವನ್ನು ಅನುಮೋದಿಸುವುದಿಲ್ಲ. ಭಾರತೀಯ ಸ್ನೇಹಿತರೇ" ಎಂದು ಅಣ್ಣಾಮಲೈ ಸರಣಿ ಟ್ವೀಟ್‌ ಮಾಡಿದ್ದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಉತ್ತರ ಭಾರತೀಯರ ಬಗ್ಗೆ ಡಿಎಂಕೆ ಸಂಸದರ ನೀಚ ಕಾಮೆಂಟ್‌ಗಳು, ಡಿಎಂಕೆ ಸಚಿವರು ಅವರನ್ನು ಪಾನಿಪುರಿ ವಾಲಾ ಎಂದು ಕರೆಯುವುದು ಮತ್ತು ಅವರ ಮೈತ್ರಿಕೂಟದ ಸದಸ್ಯರು ಅವರ ವಲಸೆಗೆ ಒತ್ತಾಯಿಸುತ್ತಿರುವುದರ ಪರಿಣಾಮವನ್ನು ಇಂದು ನಾವು ನೋಡುತ್ತಿದ್ದೇವೆ" ಎಂದು ಅಣ್ಣಾಮಲೈ ಹೇಳಿದ್ದರು.

‌ವಲಸಿಗರ ಮೇಲಿನ ದಾಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಅಣ್ಣಾಮಲೈ ಮಾತ್ರವಲ್ಲದೆ, ಬಿಜೆಪಿ ವಕ್ತಾರ ಪ್ರಶಾಂತ್ ಉಮ್ರಾವ್ ಮತ್ತು ಇಬ್ಬರು ಪತ್ರಕರ್ತರು ಸೇರಿದಂತೆ ನಾಲ್ವರ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.

Similar News