ಬಾಲಿವುಡ್‌ನಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ 'ಪಠಾಣ್':‌ 1028 ಕೋಟಿ ರೂ. ಗಳಿಕೆ

Update: 2023-03-05 08:54 GMT

ಮುಂಬೈ: ಜನವರಿಯಲ್ಲಿ ಬಿಡುಗಡೆಯಾದಾಗಿನಿಂದ ಈವರೆಗೆ 'ಪಠಾಣ್' ಚಿತ್ರದ ಜಾಗತಿಕ ಗಳಿಕೆ ರೂ. 1,028 ಕೋಟಿ ಆಗಿದ್ದು, ಆ ಮೂಲಕ ಅದು ಭಾರತದ ಸಾರ್ವಕಾಲಿಕ ನಂ. 1 ಹಿಂದಿ ಸಿನಿಮಾ ಆಗಿದೆ ಎಂದು ಯಶ್‌ರಾಜ್ ಫಿಲ್ಮ್ಸ್ ಹೇಳಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಸಿನಿಮಾ ನಿರ್ಮಾಣ ಸಂಸ್ಥೆಯ ಪ್ರಕಾರ, ಆನಂದ್ ಸಿದ್ಧಾರ್ಥ್ ನಿರ್ದೇಶನದ 'ಪಠಾಣ್' ಸಿನಿಮಾವು ಆರನೇ ಶುಕ್ರವಾರದಂದು ಭಾರತದಲ್ಲಿ ರೂ. 1.07 ಕೋಟಿ ನಿವ್ವಳ ಗಳಿಕೆ ಮಾಡಿದೆ. (ಹಿಂದಿ ಅವತರಣಿಕೆಯಲ್ಲಿ ರೂ. 1.05 ಕೋಟಿ ಹಾಗೂ ಭಾಷಾಂತರ ಆವೃತ್ತಿಯಲ್ಲಿ 0.02 ಕೋಟಿ)

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಯಶ್‌ರಾಜ್ ಫಿಲ್ಮ್ಸ್, "'ಪಠಾಣ್' ಸಿನಿಮಾವು ಜಗತ್ತಿನಾದ್ಯಂತ ಒಟ್ಟು ಅಮೋಘ ರೂ. 1,028 ಕೋಟಿ ಗಳಿಕೆ ಮಾಡಿದೆ. (ಭಾರತದಲ್ಲಿ ರೂ. 641.50 ಕೋಟಿ, ಹೊರದೇಶಗಳಲ್ಲಿ ರೂ. 386.50 ಕೋಟಿ)" ಎಂದು ತಿಳಿಸಿದೆ.

ನಾಲ್ಕು ವರ್ಷಗಳ ಕಾಲ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರದಿದ್ದ ಬಾಕ್ಸಾಫೀಸ್ ಬಾದ್‌ಶಾ ಶಾರೂಖ್ ಖಾನ್ ಪಾಲಿಗೆ 'ಪಠಾಣ್' ಸಿನಿಮಾ ಅಮೋಘ ಮರಳುವಿಕೆಯನ್ನು ನೀಡಿದೆ. ಜನವರಿ 25ರಂದು ಬಿಡುಗಡೆಯಾದ ಈ ಚಿತ್ರವು ಭಾರಿ ನಿರೀಕ್ಷೆ ಮೂಡಿಸಿ, ದಾಖಲೆಯ ಮುಂಗಡ ಕಾಯ್ದಿರಿಸುವಿಕೆಗೆ ಸಾಕ್ಷಿಯಾಗಿತ್ತು.

ರೂ. 1,000 ಕೋಟಿ ಗಳಿಕೆಯನ್ನು ದಾಟಿರುವ ಇತರ ಭಾರತೀಯ ಸಿನಿಮಾಗಳ ಪೈಕಿ 'ಬಾಹುಬಲಿ 2', 'ಆರ್‌ಆರ್‌ಆರ್' ಮತ್ತು 'ಕೆಜಿಎಫ್-2' ಸೇರಿವೆ.

Similar News