​ ಉದ್ಯಮಗಳಿಗೆ ಭಾರತ ಯೋಗ್ಯ ತಾಣ: ನಿರ್ಮಲಾ ಸೀತಾರಾಮನ್

Update: 2023-03-05 16:42 GMT

ಹೊಸದಿಲ್ಲಿ,ಮಾ.5: ಭಾರತವು ಉದ್ಯಮಗಳಿಗೆ ಯೋಗ್ಯತಾಣವಾಗಿದ್ದು,  ಬೆಳೆಯುತ್ತಿರುವ ಆರ್ಥಿಕತೆಗೆ ಅತ್ಯವಶ್ಯಕವಾಗಿರುವ  ಖರೀದಿ ಸಾಮರ್ಥ್ಯದ ಗ್ರಾಹಕರು, ತಂತ್ರಜ್ಞಾನ ಪ್ರೇರಿತವಾದ ಸಾರ್ವಜನಿಕ ಹೂಡಿಕೆ ಹಾಗೂ ಉತ್ಪನ್ನಗಳು ಮತ್ತು  ಉತ್ಕೃಷ್ಟವಾದ ಡಿಜಿಟಲ್ ಮೂಲಸೌಕರ್ಯಗಳನ್ನು ಒಳಗೊಂಡಿದೆ   ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವಿವಾರ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ರವಿವಾರ ನಡೆದ ಪ್ರತಿಷ್ಠಿತ ರೈಸಿನಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖಾಸಗಿ ಉದ್ಯಮರಂಗದ ಹೂಡಿಕೆಯಿರದಂತಹ ಯಾವುದೇ ವಲಯ ಈಗ ಭಾರತದಲ್ಲಿಲ್ಲ ಎಂದರು. ಸಾರ್ವಜನಿಕ ಉದ್ಯಮ ವಲಯದ ಕುರಿತ ಕೇಂದ್ರ ಸರಕಾರದ ನೀತಿಯು ಮರುಳುತನದಿಂದ ಕೂಡಿಲ್ಲ ಮತ್ತು ಸರಕಾರವು ಎಲ್ಲವನ್ನೂ ಮಾರಾಟ ಮಾಡುತ್ತಿಲ್ಲ. ಪ್ರತಿಪಕ್ಷಗಳಿಗೆ ಅದು  ಪೂರ್ಣವಾಗಿ ತಿಳಿದಿದ್ದರೂ,  ಕೇಂದ್ರ ಸರಕಾರವು  ಅವುಗಳನ್ನು ಮಾರುತ್ತಿದ್ದೇವೆಂದು ಹೇಳಿಕೊಳ್ಳುತ್ತಿವೆ. ನಾವು ಅವನ್ನು ಮಾರಾಟ ಮಾಡುತ್ತಿಲ್ಲ ಎಂದು ನಿರ್ಮಲಾ ಸ್ಪಷ್ಟಪಡಿಸಿದರು.

ಉತ್ತಮವಾಗಿ ತರಬೇತುಗೊಂಡ ಯುವಜನತೆ ಹಾಗೂ ಮಧ್ಯಮವರ್ಗವು,  ಸೀಮಿತ ಪೈಪೋಟಿಯ ಮಾರುಕಟ್ಟೆ,, ತಂತ್ರಜ್ಞಾನ ಪ್ರೇರಿತ ಹೂಡಿಕೆ ಹಾಗೂ ಸಾರ್ವಜನಿಕ ಮೂಲಸೌಕರ್ಯವು, ಭಾರತದ ಸುಸ್ಥಿರ ಬೆಳವಣಿಗೆಗೆ ಕಾರಣಗಳಾಗಿವೆ ಎಂದುಸೀತಾರಾಮನ್ ತಿಳಿಸಿದರು.

ಆತ್ಮನಿರ್ಭರ ಭಾರತಕ್ಕೆ   ಸರಕಾರವು ಒತ್ತು ನೀಡುತ್ತಿರುವ ಬಗ್ಗೆ ಪ್ರಸ್ತಾವಿಸಿದ  ಅವರು, ಅದು  ಸ್ವಯಂರಕ್ಷಣೆಯ ಕ್ರಮವಲ್ಲವೆಂದು ಹೇಳಿದರು.

Similar News