ವೈಯುಕ್ತಿಕ ಕಾರ್ಯಸೂಚಿಗಳಿಗೆ ಮಕ್ಕಳ ದುರ್ಬಳಕೆ ಆರೋಪ: ಆತಿಶಿ ವಿರುದ್ಧ ಎಫ್‌ಐಆರ್ ದಾಖಲಿಸಲು ಎನ್‌ಸಿಪಿಸಿಆರ್ ಸೂಚನೆ

Update: 2023-03-05 17:07 GMT

ಹೊಸದಿಲ್ಲಿ, ಮಾ. 6: ವೈಯುಕ್ತಿಕ ಕಾರ್ಯಸೂಚಿಗಳಿಗಾಗಿ ಮಕ್ಕಳನ್ನು ದುರ್ಬಳಕೆ ಮಾಡಿದ ಆರೋಪಕ್ಕಾಗಿ ಆಮ್ ಆದ್ಮಿ ಪಕ್ಷದ ನಾಯಕಿ ಆತಿಶಿ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ದಿಲ್ಲಿ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. 

ಆತಿಶಿ ಸೇರಿದಂತೆ ಹಲವು ವ್ಯಕ್ತಿಗಳು ಹಾಗೂ ಶಿಕ್ಷಣ ಕಾರ್ಯಪಡೆಯ ಸದಸ್ಯರ ವಿರುದ್ಧ  ಬಿಜೆಪಿಯ ನಾಯಕ ಮನೋಜ್ ತಿವಾರಿ ಅವರು ಎನ್‌ಸಿಪಿಸಿಆರ್‌ನ ಅಧ್ಯಕ್ಷೆ ಪ್ರಿಯಾಂಕಾ ಕನಗೂ ಅವರಿಗೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗ ಈ ಪತ್ರಗಳನ್ನು ರವಾನಿಸಿದೆ. 

ಆತಿಶಿ ಅವರ ನಿರ್ದೇಶನದಂತೆ ತಮ್ಮ ವೈಯುಕ್ತಿಕ ಕಾರ್ಯಸೂಚಿ  ಹಾಗೂ ರಾಜಕೀಯ ಪ್ರಚಾರಕ್ಕಾಗಿ ಶಾಲೆಗಳಲ್ಲಿ ಕಲಿಯುತ್ತಿರುವ  ಅಪ್ರಾಪ್ತರನ್ನು ದಿಲ್ಲಿ ಶಿಕ್ಷಣ ಕಾರ್ಯ ಪಡೆ ದುರ್ಬಳಕೆ  ಮಾಡಿಕೊಳ್ಳುತ್ತಿದೆ ಎಂದು ಅವರು  ಮಾಹಿತಿ ನೀಡಿದ್ದಾರೆ ಎಂದು ಮಕ್ಕಳ ಹಕ್ಕುಗಳ ಆಯೋಗ ತಿಳಿಸಿದೆ.

ಈಗ ರದ್ದುಪಡಿಸಲಾದ ದಿಲ್ಲಿಯ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐಯಿಂದ ಫೆಬ್ರವರಿ 26ರಂದು ಬಂಧಿತರಾದ ದಿಲ್ಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಪರವಾಗಿ ಗಮನವನ್ನು ಬೇರೆಡೆ ಸೆಳೆಯಲು ಅಪ್ರಾಪ್ತರನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು ಎಂದು ಮಕ್ಕಳ ಹಕ್ಕುಗಳ ಆಯೋಗ ಆರೋಪಿಸಿದೆ. 

ತೀವಾರಿ ಅವರ ದೂರಿನ ಆಧಾರದಲ್ಲಿ ಆಯೋಗ ಶಿಕ್ಷಣ ಕಾರ್ಯ ಪಡೆಯ ಸದಸ್ಯರಾದ ಶೈಲೇಶ್, ರಾಹುಲ್ ತಿವಾರಿ, ಮೈತ್ರೇಯಿ ಕಾಲೇಜಿನ ಅಧ್ಯಕ್ಷ ವೈಭವ್ ಶ್ರೀವಾತ್ಸವ ಹಾಗೂ ಮಾಜಿ ಉಪ ಮುಖ್ಯಮಂತ್ರಿಯ ಕಚೇರಿಯಲ್ಲಿ ಅಧಿಕಾರಿಯಾಗಿರುವ ತರಿಶಿ ಶರ್ಮಾ ಅವರ ಹೆಸರನ್ನು ದೂರು ಆಧರಿಸಿ ಆಯೋಗ  ಉಲ್ಲೇಖಿಸಿದೆ. 

ದಿಲ್ಲಿಯ ಸಂವಾದ ಹಾಗೂ ಅಭಿವೃದ್ಧಿ ಆಯೋಗದ ಉಪಾಧ್ಯಕ್ಷೆ ಜಾಸ್ಮಿನ್ ಶಾ ಅವರನ್ನು ಕೂಡ ಹೆಸರಿಸಲಾಗಿದೆ. ಈ ಪತ್ರದಲ್ಲಿ ಮಕ್ಕಳ ಹಕ್ಕುಗಳ ಆಯೋಗದ ವರಿಷ್ಠೆ ಪ್ರಿಯಾಂಕಾ ಕನೂಂಗು, ಮಕ್ಕಳ ಹಿತಾಸಕ್ತಿ ಹಾಗೂ ಹಕ್ಕುಗಳ ಉಲಂಘನೆ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ತಿವಾರಿ ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದ್ದಾರೆ.

Similar News