×
Ad

4 ವರ್ಷಗಳಿಂದ ಲೋಕಸಭಾ ಉಪಸ್ಪೀಕರ್ ಹುದ್ದೆ ಖಾಲಿ ಬಿದ್ದಿರುವುದು ಅಸಂವಿಧಾನಿಕ: ಕಾಂಗ್ರೆಸ್

Update: 2023-03-05 23:43 IST

ಹೊಸದಿಲ್ಲಿ,ಮಾ.5: ಲೋಕಸಭೆಗೆ ಉಪಸ್ಪೀಕರ್  ಇಲ್ಲದೆ ಇರುವುದು ಅಸಾಂವಿಧಾನಿಕವೆಂದು ಕಾಂಗ್ರೆಸ್  ಪಕ್ಷವು ರವಿವಾರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜಯರಾಮ ರಮೇಶ್ ಅವರು ಕಳೆದ ನಾಲ್ಕು  ವರ್ಷಗಳಿಂದ ಲೋಕಸಭೆಗೆ  ಉಪಸ್ಪೀಕರ್  ಆಯ್ಕೆಯಾಗಿಲ್ಲ . ಇದು ಅಸಂವಿಧಾನಿಕವಾಗಿದೆ ಎಂದವರು ಹೇಳಿದ್ದಾರೆ.

 ಲೋಕಸಭೆ ಹಾಗೂ ಹಲವಾರು ರಾಜ್ಯ ವಿಧಾನಸಭೆಗಳಲ್ಲಿ ಉಪಸ್ಪೀಕರ್ ಅವರನ್ನು ಆಯ್ಕೆ ಮಾಡದೆ ಇರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ  ಹಿತಾಸಕ್ತಿಯ ಅರ್ಜಿಗೆ  ಸಂಬಂಧಿಸಿ ಸುಪ್ರೀಂಕೋರ್ಟ್ ಕಳೆದ ತಿಂಗಳು ಕೇಂದ್ರದ ಪ್ರತಿಕ್ರಿಯೆಯನ್ನು ಕೇಳಿರುವ  ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ.

‘‘1956ರ ಮಾರ್ಚ್ನಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರತಿಪಕ್ಷವಾದ ಅಕಾಲಿದಳದ ಸಂಸದ  ಹಾಗೂ ನೆಹರೂ ಅವರ ಕಟುಟೀಕಾಕಾರ ಸರ್ದಾರ್ ಹುಕುಂ ಸಿಂಗ್ ಅವರನ್ನು ಉಪಸ್ಪೀಕರ್ ಹುದ್ದೆಗೆ ನೇಮಿಸಿದ್ದರು ಹಾಗೂ ಅವರು ಅವಿರೋಧವಾಗಿ  ಆಯ್ಕೆಗೊಂಡಿದ್ದರು. ಆಗಿದ್ದಕ್ಕಿಂತ ಈಗಿನ ಪರಿಸ್ಥಿತಿಗೆ ಎಷ್ಟೊಂದು ವ್ಯತ್ಯಾಸವಿದೆ’’ ಎಂದು ರಮೇಶ್ ಹೇಳಿದ್ದಾರೆ.

ಸಂಸದೀಯ ಸಂಪ್ರದಾಯದ ಪ್ರಕಾರ ಲೋಕಸಭೆಯ ಉಪಸ್ಪೀಕರ್ ಹುದ್ದೆಯನ್ನು  ಸಾಮಾನ್ಯವಾಗಿ ಪ್ರಮುಖ ಪ್ರತಿಪಕ್ಷದ ಅಭ್ಯರ್ಥಿಗೆ ನೀಡಲಾಗುತ್ತದೆ. ಆದರೆ  2019ರ ಜೂನ್ 23ರಿಂದೀಚೆಗೆ ಲೋಕಸಭಾ  ಉಪಸ್ಪೀಕರ್ ಹುದ್ದೆಯು ಖಾಲಿಬಿದ್ದಿದೆ.

Similar News