×
Ad

ಚೀನೀಯರ ಅತಿಕ್ರಮಣದ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ: ಲಂಡನ್‌ನಲ್ಲಿ ರಾಹುಲ್ ಗಾಂಧಿ

Update: 2023-03-06 15:36 IST

ಲಂಡನ್: ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ (BJP) ಸರ್ಕಾರದ ವಿರುದ್ಧದ ತಮ್ಮ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi), ಚೀನೀಯರು ನಮ್ಮ ದೇಶದ ಪ್ರದೇಶವನ್ನು ಅತಿಕ್ರಮಣ ಮಾಡಿದ್ದರೂ, ಆ ವಿಷಯವನ್ನು ಭಾರತೀಯ ಸಂಸತ್ತಿನಲ್ಲಿ ಚರ್ಚಿಸಲು ವಿಪಕ್ಷಗಳಿಗೆ ಅವಕಾಶ ನಿರಾಕರಿಸಲಾಯಿತು ಎಂದು ಆರೋಪಿಸಿದ್ದಾರೆ ಎಂದು indiatoday.com ವರದಿ ಮಾಡಿದೆ.

ರಾಹುಲ್ ಗಾಂಧಿ ಅವರು ಲಂಡನ್ನಿನ ಹೌನ್ಸ್ಲೋದಲ್ಲಿ ಸುಮಾರು 1500 ಭಾರತೀಯ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದರು.

"ಸರ್ಕಾರವು ದೇಶದಲ್ಲಿ ವಿರೋಧ ಪಕ್ಷಗಳು ಎಂಬ ಪರಿಕಲ್ಪನೆಗೆ ಅವಕಾಶ ನೀಡುತ್ತಿಲ್ಲ. ಇದೇ ಸಂಸತ್ತಿನಲ್ಲೂ ಆಗುತ್ತಿದ್ದು, ಚೀನೀಯರು ಭಾರತದ ಪ್ರದೇಶಗಳನ್ನು ಅತಿಕ್ರಮಿಸಿಕೊಂಡು ಕುಳಿತಿದ್ದರೂ, ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುತ್ತಿಲ್ಲ. ಇದು ನಿಜಕ್ಕೂ ಅವಮಾನಕರ" ಎಂದು ಅವರು ಟೀಕಿಸಿದ್ದಾರೆ.

"ನಮ್ಮ ದೇಶವು ಮುಕ್ತ ಸ್ವಾತಂತ್ರ್ಯದ ದೇಶವಾಗಿದ್ದು, ಇಲ್ಲಿ ನಮ್ಮ ಜಾಣ್ಮೆಯ ಬಗ್ಗೆ ಹೆಮ್ಮೆಯೊಂದಿಗೆ ಪರಸ್ಪರರನ್ನು ಗೌರವಿಸುತ್ತೇವೆ. ಈ ಸಂಪ್ರದಾಯವನ್ನು ನಾಶಗೊಳಿಸಲಾಗಿದೆ. ಮಾಧ್ಯಮಗಳಲ್ಲಿ ಇಂತಹ ನಿರೂಪಣೆಯನ್ನು ನೀವು ನೋಡಬಹುದು. ಹೀಗಾಗಿಯೇ ನಾವು ಭಾರತ್ ಜೋಡೊ ಯಾತ್ರೆಯನ್ನು ಹಮ್ಮಿಕೊಂಡೆವು" ಎಂದು ಕಾರ್ಯಕ್ರಮವನ್ನುದ್ದೇಶಿಸಿ ರಾಹುಲ್ ಗಾಂಧಿ ಹೇಳಿದ್ದಾರೆ.

ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಯಾವುದೇ ಸಲಹೆಯನ್ನು ಚರ್ಚಿಸಲು ಅವಕಾಶ ನೀಡದ ಬಿಜೆಪಿ ಸರ್ಕಾರದ ವಿರುದ್ಧ ವಯನಾಡ್ ಸಂಸದರೂ ಆಗಿರುವ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

"ವಿರೋಧ ಪಕ್ಷಗಳ ಸಲಹೆಯನ್ನು ಚರ್ಚಿಸಲು ಅವಕಾಶ ನೀಡಲಾಗುತ್ತಿಲ್ಲ. ಈ ಹಿಂದೆ ನಾವೆಲ್ಲರೂ ಇದ್ದ ಭಾರತ ಹೀಗಿರಲಿಲ್ಲ" ಎಂದು ಕಿಡಿ ಕಾರಿದ್ದಾರೆ.

ಇದಕ್ಕೂ ಮುನ್ನ, ಲಂಡನ್ನಿನಲ್ಲಿರುವ ಗುರು ಬಸವಣ್ಣ ಹಾಗೂ ಮಹಾತ್ಮ ಗಾಂಧಿ ಪುತ್ಥಳಿಗಳಿಗೆ ರಾಹುಲ್ ಗಾಂಧಿ ಗೌರವ ನಮನ ಸಲ್ಲಿಸಿದರು.

ಇದನ್ನೂ ಓದಿ: ಯಡಿಯೂರಪ್ಪ ಹೆಲಿಕಾಪ್ಟರ್ ಲ್ಯಾಂಡಿಂಗ್ ಗೆ ಅಡ್ಡಿಯಾದ ಪ್ಲಾಸ್ಟಿಕ್ ಬ್ಯಾಗ್, ತ್ಯಾಜ್ಯಗಳು!

Similar News