ಬಳಕೆಯಲ್ಲಿ ಇಲ್ಲದ 65 ಕಾನೂನು ರದ್ದುಪಡಿಸಲು ಮಸೂದೆ ಮಂಡನೆ: ಕೇಂದ್ರ ಸಚಿವ ಕಿರಣ್ ರಿಜಿಜು

Update: 2023-03-06 18:20 GMT

ಮುಂಬೈ, ಮಾ. 6:  ಬಳಕೆಯಲ್ಲಿ ಇಲ್ಲದ 65 ಕಾಯ್ದೆಗಳು ಹಾಗೂ ಇತರ ನಿಬಂಧನೆಗಳನ್ನು ರದ್ದುಗೊಳಿಸುವ ಮಸೂದೆಯೊಂದನ್ನು ಕೇಂದ್ರ ಸರಕಾರ  ಮಾರ್ಚ್ 13ರಂದು ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಮಂಡಿಸಲಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ತಿಳಿಸಿದ್ದಾರೆ.

ಗೋವಾದಲ್ಲಿ 23ನೇ ಕಾಮನ್ ವೆಲ್ತ್ ಕಾನೂನು ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ವಿವಿಧ ನ್ಯಾಯಾಲಯಗಳಲ್ಲಿ 4.98 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಇವೆ. ತಂತ್ರಜ್ಞಾನದ ಬಳಕೆ ಮೂಲಕ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು. ಕಾಗದ ರಹಿತ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೊಳಿಸುವುದು ಕೇಂದ್ರ ಸರಕಾರದ ಗುರಿಯಾಗಿದೆ ಎಂದು ತಿಳಿಸಿದರು.

‘‘ಇಂದು ಕೇಂದ್ರ ಸರಕಾರ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದೇಶದ ಎಲ್ಲ ನಾಗರಿಕರು ಇದರ ಫಲಾನುಭವಿಗಳಾಗಿದ್ದಾರೆ. ಕಲ್ಯಾಣ ರಾಜ್ಯ ಪರಿಕಲ್ಪನೆಯಲ್ಲಿ  ಪ್ರತಿಯೋರ್ವ ನಾಗರಿಕನ ಅಹವಾಲು ಆಲಿಸುವುದು ತುಂಬಾ ಮುಖ್ಯವಾಗಿದೆ’’ ಎಂದು ಅವರು ಹೇಳಿದರು.

ಸಾಮಾನ್ಯ ಜನರ ಜೀವನವನ್ನು ಸುಗುಮಗೊಳಿಸುವುದಕ್ಕೆ ಅಗತ್ಯ ಇರುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ನಮ್ಮ ಸರಕಾರ ಮುಂಚೂಣಿಯಲ್ಲಿದೆ. ಈ ಸಂಬಂಧ ಸರಕಾರ ರೂಪಿಸಿರುವ ಹಲವು ನೀತಿಗಳು ಯಶಸ್ವಿಯಾಗಿವೆ ಎಂದು ಕಿರಣ್ ರಿಜಿಜು ತಿಳಿಸಿದರು.

ಕಾನೂನು ಇರುವುದು ಜನರಿಗಾಗಿ ಎಂಬುದು ಸರಕಾರದ ನಂಬಿಕೆ. ಅಂತಹ ಕಾನೂನುಗಳು ಅಡೆತಡೆಯಾಗಿ ಮಾರ್ಪಟ್ಟರೆ, ಅವುಗಳ ಅನುಸರಣೆಯು ಜನರ ಜೀವನದ ಮೇಲೆ ಹೊರೆಯಾಗಿ ಪರಿಗಣಮಿಸುತ್ತದೆ. ಆದುದರಿಂದ ಅಂತಹ ಕಾನೂನುಗಳನ್ನು ತೆಗೆದು ಹಾಕುವುದು ಸೂಕ್ತ ಎಂದು ಅವರು ಹೇಳಿದರು.

ಕಳೆದ ಎಂಟೂವರೆ ವರ್ಷಗಳಲ್ಲಿ ನಾವು ಬಳಕೆಯಲ್ಲಿ ಇಲ್ಲದ ಹಾಗೂ ಅನಗತ್ಯವಾಗಿರುವ 1,486 ಕಾನೂನುಗಳನ್ನು ರದ್ದುಗೊಳಿಸಿದ್ದೇವೆ. ಇಂತಹ ಇನ್ನೂ 65 ಕಾನೂನುಗಳನ್ನು ರದ್ದುಪಡಿಸುವ ಮಸೂದೆಯನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಂಡಿಸಲಿದ್ದೇವೆ ಎಂದು ಕಿರಣ್ ರಿಜಿಜು ತಿಳಿಸಿದರು.

Similar News