ಮೂರು ವಾರಗಳಿಂದ ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

Update: 2023-03-07 02:43 GMT

ಹೊಸದಿಲ್ಲಿ: ದೇಶದಲ್ಲಿ ಕಳೆದ ಮೂರು ವಾರಗಳಿಂದ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಒಟ್ಟಾರೆಯಾಗಿ ಪತ್ತೆಯಾದ ಪ್ರಕರಣಗಳ ಸಂಖ್ಯೆ ಕೇವಲ 1898 ಇದ್ದರೂ, ಕಳೆದ ಒಂದು ವಾರದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಕೋವಿಡ್-19ಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ.

ಭಾನುವಾರಕ್ಕೆ ಅಂತ್ಯಗೊಂಡ ವಾರದಲ್ಲಿ ಹಿಂದಿನ ವಾರಕ್ಕೆ ಹೋಲಿಸಿದರೆ ದೇಶಾದ್ಯಂತ ಪ್ರಕರಣಗಳ ಸಂಖ್ಯೆ ಶೇಕಡ 63ರಷ್ಟು ಹೆಚ್ಚಿದೆ. ಹಿಂದಿನ ವಾರ ಶೇಕಡ 39 ಮತ್ತು ಅದಕ್ಕೂ ಹಿಂದಿನ ವಾರ ಶೇಕಡ 13ರಷ್ಟು ಏರಿಕೆ ಕಂಡು ಬಂದಿತ್ತು. ಕಳೆದ ಐದು ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹೊಸ ಪ್ರಕರಣಗಳು ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ವರದಿಯಾಗುತ್ತಿವೆ.

ದೇಶದಲ್ಲಿ ಫ್ಲೂ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ನಡುವೆಯೇ ಕೋವಿಡ್-19 ಪ್ರಕರಣಗಳೂ ಏರಿಕೆಯಾಗುತ್ತಿವೆ. ಆದರೆ ಕೋವಿಡ್ ಸಾವಿನ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ಕಳೆದ ವಾರ ದೇಶದಲ್ಲಿ 1898 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ಎರಡು ವಾರಗಳಲ್ಲಿ ದಾಖಲಾದ 1163 ಮತ್ತು 839ಕ್ಕೆ ಹೋಲಿಸಿದರೆ ಅಧಿಕ. ಇದು ದೊಡ್ಡ ಸಂಖ್ಯೆಯಲ್ಲದಿದ್ದರೂ, ನಿಧಾನವಾಗಿ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

Similar News