ನನ್ನ ತಲೆ ಕತ್ತರಿಸಿದರೂ ತುಟ್ಟಿಭತ್ಯೆ ಹೆಚ್ಚಳ ಅಸಾಧ್ಯ: ಮಮತಾ ಬ್ಯಾನರ್ಜಿ

Update: 2023-03-07 05:40 GMT

ಕೊಲ್ಕತ್ತಾ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಗೆ ಸಮಾನವಾಗಿ ತುಟ್ಟಿಭತ್ಯೆ ಹೆಚ್ಚಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ "ಪ್ರತಿಭಟನಾಕಾರರು ನನ್ನ ತಲೆ ಕತ್ತರಿಸಿದರೂ ತುಟ್ಟಿಭತ್ಯೆ ಹೆಚ್ಚಳ ಅಸಾಧ್ಯ" ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯ ವಿಸ್ತರಿತ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಿ ನೌಕರರ ವೇತನ ಸಂರಚನೆಯ ಭಿನ್ನತೆಯನ್ನು ಉಲ್ಲೇಖಿಸಿದ ಅವರು, ಟಿಎಂಸಿ ಸರ್ಕಾರ ರಾಜ್ಯದಲ್ಲಿ ಶೇಕಡ 105ರಷ್ಟು ತುಟ್ಟಿಭತ್ಯೆ ನೀಡುತ್ತಿದೆ ಎಂದು ಪ್ರತಿಪಾದಿಸಿದರು.

"ನಿಮಗೆ ಎಷ್ಟು ಬೇಕು? ನಿಮಗೆ ತೃಪ್ತಿಯಾಗುವುದು ಯಾವಾಗ? ದಯವಿಟ್ಟು ನನ್ನ ತಲೆ ಕಡಿಯಿರಿ. ಬಹುಶಃ ಆಗ ನಿಮಗೆ ಸಮಾಧಾನವಾಗಬಹುದು.. ನೀವು ನನ್ನನ್ನು ಇಷ್ಟಪಡದಿದ್ದಲ್ಲಿ, ನನ್ನ ತಲೆ ಕತ್ತರಿಸಿ. ಆದರೂ ನನ್ನಿಂದ ಹೆಚ್ಚಿನದನ್ನು ಪಡೆಯಲು ಸಾಧ್ಯವಿಲ್ಲ" ಎಂದು ಖಡಾಖಂಡಿತವಾಗಿ ನುಡಿದರು.

ಸಂಗ್ರಾಮಿ ಜೌತ ಮೋರ್ಚಾ ಸೇರಿದಂತೆ ವಿವಿಧ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳು ಕೇಂದ್ರ ಸರ್ಕಾರ ಘೋಷಿಸಿರುವ ತುಟ್ಟಿಭತ್ಯೆಗೆ ಸಮಾನವಾದ ತುಟ್ಟಿಭತ್ಯೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ.

ಬಿಜೆಪಿ ಆಡಳಿತದ ಉತ್ತರ ಪ್ರದೇಶ ಹಾಗೂ ತ್ರಿಪುರಾದಲ್ಲಿ ತುಟ್ಟಿಭತ್ಯೆ ನೀಡುತ್ತಿಲ್ಲ ಎಂದ ಅವರು, ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೆ ಪಿಂಚಣಿಯನ್ನು ಪಶ್ಚಿಮ ಬಂಗಾಳದಲ್ಲಿ ಮಾತ್ರ ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.

Similar News