ವಲಸೆ ಕಾರ್ಮಿಕರ ಕುರಿತು ಸುಳ್ಳುಸುದ್ದಿ ಪ್ರಸಾರ: ಬಲಪಂಥೀಯ Opindia ನ್ಯೂಸ್‌ ಪೋರ್ಟಲ್‌ ವಿರುದ್ಧ ಪ್ರಕರಣ ದಾಖಲು

Update: 2023-03-07 06:15 GMT

ಚೆನ್ನೈ: ಉತ್ತರಭಾರತದಿಂದ ತಮಿಳುನಾಡಿಗೆ ಆಗಮಿಸಿರುವ ವಲಸೆ ಕಾರ್ಮಿಕರಲ್ಲಿ ಭೀತಿ ಹುಟ್ಟಿಸಲು ನಕಲಿ ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಬಲಪಂಥೀಯ ವಿಚಾರಧಾರೆಗಳನ್ನು ಹರಡುವ ಮತ್ತು ಸುಳ್ಳುಸುದ್ದಿಗಳಿಗೆ ಕುಖ್ಯಾತಿಯಾಗಿರುವ ಒಪಿ ಇಂಡಿಯಾ ವೆಬ್‌ಸೈಟ್‌ ವಿರುದ್ಧ ತಮಿಳುನಾಡಿನ ಆವಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸ್ ಪ್ರಕಟಣೆಯ ಪ್ರಕಾರ, ಒಪಿಇಂಡಿಯಾ ವೆಬ್‌ಸೈಟ್ ಸಿಇಒ ರಾಹುಲ್ ರುಸಾನ್ ಮತ್ತು ಸಂಪಾದಕಿ ನೂಪುರ್ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಐಟಿ ವಿಭಾಗದ ಸದಸ್ಯರ ದೂರಿನ ಆಧಾರದ ಮೇಲೆ ಅವಡಿಯ ತಿರುನಿಂದ್ರವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡಿನಲ್ಲಿ ಬಿಹಾರಿ ವಲಸೆ ಕಾರ್ಮಿಕರ ಮೇಲೆ ‘ದಾಳಿ’ ನಡೆದಿದೆ ಎಂದು ಹೇಳಲಾದ ವರದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿ, ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ಕಾರ್ಮಿಕರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಆಪಾದಿತ ‘ದಾಳಿ’ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವೀಡಿಯೊಗಳು ನಕಲಿ ಮತ್ತು ಅವುಗಳಲ್ಲಿ ಹೆಚ್ಚಿನವು ತಮಿಳುನಾಡಿನಲ್ಲಿ ನಡೆದಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ತಮಿಳುನಾಡು ಡಿಜಿಪಿ ಸಿ ಸೈಲೇಂದ್ರ ಬಾಬು ಅವರು ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸುವಂತೆ ಒತ್ತಾಯಿಸಿದರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ "ಆಕ್ಷೇಪಾರ್ಹ" ಸಂದೇಶಗಳನ್ನು ಹರಡದಂತೆ ಜನರನ್ನು ಕೇಳಿಕೊಂಡರು.

"ಈಗ ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ಕಾರ್ಮಿಕರು ತಮ್ಮ ಕೆಲಸವನ್ನು ಪುನರಾರಂಭಿಸಿದ್ದಾರೆ. ಅವರಲ್ಲಿ ಕೆಲವರು ಹೋಳಿ ಆಚರಣೆಗೆ ತಮ್ಮ ಊರಿಗೆ ತೆರಳಿದ್ದಾರೆ. ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದನ್ನು ಅವರು ಮಾಧ್ಯಮಗಳಲ್ಲಿ ನೋಡಿದ್ದರೂ, ಅವೆಲ್ಲವೂ ನಕಲಿ ವೀಡಿಯೊಗಳಾಗಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Similar News