×
Ad

ಕೈವಾರ ತಾತಯ್ಯ, ಜಗದ್ಗುರು ರೇಣುಕಾಚಾರ್ಯ ಜಯಂತಿ

Update: 2023-03-07 20:00 IST

ಉಡುಪಿ: ಉಡುಪಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಮತ್ತು ಕೈವಾರ ತಾತಯ್ಯ ಜಯಂತಿ ಆಚರಣೆಯು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಇಲಾಖೆ ವತಿಯಿಂದ ಆಚರಿಸಲಾಗುವ ಎಲ್ಲಾ ಮಹನೀಯರು, ದಾರ್ಶನಿಕರು, ತತ್ವಜ್ಞಾನಿಗಳು, ವಚನ ಕಾರರ ಬದುಕು ಹಾಗೂ ಮಾರ್ಗದರ್ಶನಗಳು ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಎಂದರು.

ಜಂಗಮ ಮಠದ ಡಾ.ಯು.ಸಿ.ನಿರಂಜನ್ ಜಯಂತಿ ಕುರಿತು ಉಪನ್ಯಾಸ ನೀಡಿ, ಮಾನವನ ದಾನವ ಗುಣಗಳನ್ನು ದಹಿಸಿ ಆತನನ್ನು ಮಹಾದೇವ ನನ್ನಾಗಿಸಲು ಅಪೂರ್ವ ಸಿದ್ಧಾಂತವನ್ನು ನೀಡಿದವರು. ಶ್ರೀ ಜಗದ್ಗುರು ರೇಣುಕಾ ಚಾರ್ಯರು. ಕೈವಾರತಾತಯ್ಯ ಅವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪಾರಂಗತರು ಮತ್ತು ಪವಾಡ ಪುರುಷರು. ಇವರೊಬ್ಬ ನಿಜವಾದ ಮಾನವತಾ ವಾದಿಯಾಗಿದ್ದಾರೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಉಪ ತಹಶೀಲ್ದಾರ್ ವಸಂತ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಗಿರೀಶ್ ಕುಮಾರ್, ವೀರಶೈವ ಸಮುದಾಯ ಮುಖಂಡರಾದ ಸಿದ್ಧಬಸವಯ್ಯ ಸ್ವಾಮಿ, ಕೇಶವಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ  ನರಸಿಂಹ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರವಿರಾಜ್ ಎಚ್.ಪಿ. ವಂದಿಸಿದರು.

Similar News