ಅಪ್ರಾಪ್ತ ವಯಸ್ಸಿನ ಮಕ್ಕಳು ನಾಪತ್ತೆ: ನ್ಯಾಯಾಲಯದ ಮೆಟ್ಟಿಲೇರಿದ ಅತೀಖ್ ಅಹ್ಮದ್ ಪತ್ನಿ
ಲಕ್ನೋ, ಮಾ. 7: ತನ್ನ ಇಬ್ಬರು ಅಪ್ರಾಪ್ತ ಪುತ್ರರಾದ ಎಹ್ಝಾನ್ ಹಾಗೂ ಅಬಾನ್ ನಾಪತ್ತೆಯಾಗಿದ್ದಾರೆ ಎಂದು ಭೂಗತ ಪಾತಕಿ ಅತೀಖ್ ಅಹ್ಮದ್ ಪತ್ನಿ ಶಿಸ್ಟಾ ಪ್ರವೀಣ್ ಅವರು ಮುಖ್ಯ ನ್ಯಾಯಾಂಗ ದಂಡಾಧಿಕಾರಿ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.
ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶ ಪೊಲೀಸರು ಇಬ್ಬರು ಮಕ್ಕಳನ್ನು ಕರೆದೊಯ್ದ ಬಳಿಕ ಅವರು ನಾಪತ್ತೆಯಾಗಿದ್ದಾರೆ ಎಂದು ಶಿಸ್ಟಾ ಹೇಳಿದ್ದಾರೆ.
2005ರಲ್ಲಿ ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಧಾನ ಸಾಕ್ಷಿಯಾಗಿದ್ದ ಉಮೇಶ್ ಪಾಲ್‌ನನ್ನು ಪ್ರಯಾಗ್‌ರಾಜ್‌ನಲ್ಲಿರುವ ಆತನ ಮನೆ ಎದುರೇ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದರು. ಈ ಹತ್ಯೆ ಪ್ರಕರಣದಲ್ಲಿ ಅತೀಖ್ ಅಹ್ಮದ್ ಸೇರಿದಂತೆ ಹಲವರ ವಿರುದ್ಧ ಆರೋಪ ಕೇಳಿ ಬಂದಿದೆ.
ಇಬ್ಬರು ಬಾಲಕರನ್ನು ಬಾಲಾಪರಾಧಿ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಅಲ್ಲಿ ಅವರು ಕಂಡು ಬಂದಿಲ್ಲ ಎಂದು ಶಿಸ್ಟಾ ಹೇಳಿದ್ದಾರೆ.
ಶಿಸ್ಟಾ ಮೊದಲು ಜಿಲ್ಲಾ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಪೊಲೀಸರು ತನ್ನ ಇಬ್ಬರು ಪುತ್ರರನ್ನು ಕರೆದೊಯ್ದಿದ್ದಾರೆ. ಆದರೆ ಮಾಹಿತಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದರು. ಪೊಲೀಸರು ಪುತ್ರರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಅಂತಹ ಹೆಸರಿನ ಬಾಲಕರು ನಮ್ಮ ಕಸ್ಟಡಿಯಲ್ಲಿ ಇಲ್ಲ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಪುತ್ರರ ಎಲ್ಲಿದ್ದಾರೆ ಎಂದು ಮಾಹಿತಿ ನೀಡುವಂತೆ ಕೋರಿ ಶಿಸ್ಟಾ ಅವರು ಮತ್ತೆ ಮುಖ್ಯ ದಂಡಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ದೂಮನ್‌ಗಂಜ್ ಪೊಲೀಸರು ಎಹ್ಝಾನ್ ಹಾಗೂ ಅಬಾನ್ ಕಸಾರಿ ಹಾಗೂ ಮಸಾರಿ ಪ್ರದೇಶದ ಬೀದಿಯಲ್ಲಿ ತಿರುಗುತ್ತಿರುವುದನ್ನು ನೋಡಿದೆವು. ಅನಂತರ ಅವರನ್ನು ಖುಲ್ಡಾಬಾದ್‌ನಲ್ಲಿರುವ ಬಾಲಾಪರಾಧಿ ಕೇಂದ್ರಕ್ಕೆ ಕರೆದೊಯ್ದೆವು ಎಂದು ತಿಳಿಸಿದರು. ಆದರೆ, ಶಿಸ್ಟಾ ಪುತ್ರರು ಅಲ್ಲಿಲ್ಲ ಎಂದು ಹೇಳಿದರು.
ಮುಖ್ಯ ನ್ಯಾಯಾಂಗ ದಂಡಾಧಿಕಾರಿ ದಿನೇಶ್ ಕುಮಾರ್ ಗೌತಮ್, ನಾಪತ್ತೆಯಾದ ಬಾಲಕರ ಬಗ್ಗೆ ಧೂಮನ್‌ಗಂಜ್ ಪೊಲೀಸ್ ಠಾಣೆಯ ಮೇಲ್ವಿಚಾರಣೆ ಅಧಿಕಾರಿ ಹಾಗೂ ಪ್ರಯಾಗ್‌ರಾಜ್‌ನ ಮಕ್ಕಳ ರಕ್ಷಣೆ ಅಧಿಕಾರಿ ರಾಜೇಶ್ ಕುಮಾರ್ ಮೌರ್ಯ ಅವರಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು. ಅಲ್ಲದೆ ವರದಿಯ ಕುರಿತ ವಿಚಾರಣೆಯನ್ನು ಮಾರ್ಚ್ 10ರಂದು ನಡೆಸಲಾಗುವುದು ಎಂದು ತಿಳಿಸಿದರು.
ಆರಂಭದಲ್ಲಿ ಜಿಲ್ಲಾ ನ್ಯಾಯಾಲಯವನ್ನು ಸಂಪರ್ಕಿಸಿದ ಶಿಸ್ಟಾ, ಪೊಲೀಸರು ತನ್ನಿಬ್ಬರು ಮಕ್ಕಳನ್ನು ಕರೆದೊಯ್ದಿದ್ದಾರೆ. ಅವರು ಮಕ್ಕಳನ್ನು ಎಲ್ಲಿ ಇರಿಸಿದ್ದಾರೆ ಎಂಬ ಮಾಹಿತಿ ನೀಡುತ್ತಿಲ್ಲ ಎಂದು ಹೇಳಿದ್ದರು.