ಇಸ್ಲಾಂ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರ ಮೀಸಲಾತಿಗೆ ಆರೆಸ್ಸೆಸ್ ವಿರೋಧ

Update: 2023-03-07 17:09 GMT

ಹೊಸದಿಲ್ಲಿ, ಮಾ. 7: ಹಿಂದೂ ಧರ್ಮದಿಂದ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ಸೌಲಭ್ಯ ವಿಸ್ತರಿಸಬಾರದು ಎಂದು ಆರ್‌ಎಸ್‌ಎಸ್‌ನ ಮಾಧ್ಯಮ ಘಟಕ ವಿಶ್ವ ಸಂವಾದ ಕೇಂದ್ರ (ವಿಎಸ್‌ಕೆ)ದ ಸಮಾವೇಶದಲ್ಲಿ ಸೋಮವಾರ ನಿರ್ಧಾರ ತೆಗೆದುಕೊಳ್ಳಲಾಗಿದೆ. ನೋಯ್ಡಾದಲ್ಲಿ ರವಿವಾರ ಸಮಾರೋಪಗೊಂಡ ಎರಡು ದಿನಗಳ ಸಮಾವೇಶದ ಸಂದರ್ಭ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿಯ ಮತಾಂತರಗೊಂಡ ವ್ಯಕ್ತಿಗಳಿಗೆ ಮೀಸಲಾತಿ ವಿಸ್ತರಿಸುವ ವಿಷಯದ ಕುರಿತು ಪರಿಶೀಲಿಸಲು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಸರಕಾರ ನಿಯೋಜಿಸಿದ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆಯೋಗಕ್ಕೆ ಮನವಿ ಸಲ್ಲಿಸಲು ಆರೆಸ್ಸೆಸ್‌ನ ಮಾಧ್ಯಮ ಘಟಕ ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಈ ವಿಷಯದ ಕುರಿತು ಪರಿಶೀಲಿಸಲು ಕೇಂದ್ರ ಸರಕಾರ ಮೂವರು ಸದಸ್ಯರ ಸಮಿತಿಯನ್ನು ನಿಯೋಜಿಸಿದ ಹಿನ್ನೆಲೆಯಲ್ಲಿ ‘‘ಮತಾಂತರ ಹಾಗೂ ಮೀಸಲಾತಿ’’ ವಿಷಯದ ಕುರಿತು ಗ್ರೇಟರ್ ನೋಯ್ಡಾದ ಗೌತಮ ಬುದ್ಧ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ತಿಂಗಳ ಮ್ಯಾಗಝಿನ್ ಹಿಂದೂ ವಿಶ್ವ, ವಿಶ್ವ ಸಂವಾದ ಕೇಂದ್ರ ಈ ಸಮಾವೇಶವನ್ನು ಆಯೋಜಿಸಿತ್ತು.

ಪರಿಶಿಷ್ಟ ಜಾತಿಗೆ ಮೀಸಲಾತಿ ಮುಂದುವರಿಸಲು ಸಮಾವೇಶ ಸರ್ವಾನುಮತದಿಂದ ಪುನರುಚ್ಚರಿಸಿದೆ. ಪರಿಶಿಷ್ಟ ಜಾತಿಗೆ ಜಾತಿಗಳ ಆಯ್ಕೆಯನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದಿರುವ ಆಧಾರದಲ್ಲಿ ಮಾಡಬೇಕು ಎಂದು ಕುಮಾರ್ ಸಮಾವೇಶ ಸಮಾರೋಪಗೊಂಡ ಬಳಿಕ ತಿಳಿಸಿದ್ದಾರೆ.

ವಿಶ್ವ ಸಂವಾದ ಕೇಂದ್ರ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆಯೋಗದ ಮುಂದೆ ಮನವಿ ಸಲ್ಲಿಸಲು ಹಾಗೂ ವಿಷಯವನ್ನು ವೈಯುಕ್ತಿಕವಾಗಿ ವಿಚಾರಣೆ ನಡೆಸುವಂತೆ ಮನವಿ ಮಾಡಲು ಸಿದ್ದತೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ. 

Similar News