ದೇಶದಲ್ಲಿ ಜನಸಂಖ್ಯೆ-ವೈದ್ಯರ ಅನುಪಾತ ಕಡಿಮೆ: ವೈದ್ಯರ ವಿಆರ್‌ಎಸ್‌ ಅರ್ಜಿ ತಿರಸ್ಕರಿಸಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್

Update: 2023-03-09 12:37 GMT

ಕೊಲ್ಕತ್ತಾ: ದೇಶದಲ್ಲಿ ಜನರು-ವೈದ್ಯರ ನಡುವಿನ ಅನುಪಾತ ಅತ್ಯಂತ ಕಡಿಮೆಯಿರುವ ಅಂಶವನ್ನು ಮುಂದಿಟ್ಟುಕೊಂಡ ಕೊಲ್ಕತ್ತಾ ಹೈಕೋರ್ಟ್‌ (Calcutta HC) ವೈದ್ಯರೊಬ್ಬರ ವಿಆರ್‌ಎಸ್‌ (VRS) ವಿನಂತಿಯನ್ನು ನಿರಾಕರಿಸಿದ ಆದೇಶವನ್ನು ಎತ್ತಿ ಹಿಡಿದಿದೆ.

ಮಧಬ್‌ ಸರ್ಕಾರ್‌ ಎಂಬ ವೈದ್ಯರ ವಿಆರ್‌ಎಸ್‌ ಅರ್ಜಿಯನ್ನು ಅನುಮತಿಸಿದ ರಾಜ್ಯ ಆಡಳಿತಾತ್ಮಕ ಟ್ರಿಬ್ಯುನಲ್‌ ನಿರ್ಧಾರವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹರೀಶ್‌ ಟಂಡನ್‌ ಮತ್ತು ಪ್ರಸೆನ್‌ಜಿತ್‌ ಬಿಸ್ವಾಸ್‌  ಅವರನ್ನೊಳಗೊಂಡ ವಿಭಾಗೀಯ ಪೀಠ  ನಡೆಸಿದೆ.

ರಾಜ್ಯ ಸರ್ಕಾರ ತನ್ನ ವಿಆರ್‌ಎಸ್‌ ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ಸರ್ಕಾರ್‌ ಅವರು ಟ್ರಿಬ್ಯುನಲ್‌ ಮೊರೆ ಹೋಗಿದ್ದರೆ, ಟ್ರಿಬ್ಯುನಲ್‌ ಅವರ ವಿಆರ್‌ಎಸ್‌ ಅರ್ಜಿಗೆ ಒಪ್ಪಿಗೆ ನೀಡಿತ್ತು. ಅರ್ಜಿದಾರ ಎಲ್ಲಾ ಷರತ್ತುಗಳನ್ನು ಪಾಲಿಸಿದ್ದರೆ ಸರ್ಕಾರ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ ಎಂದು ಟ್ರಿಬ್ಯುನಲ್‌ ಹೇಳಿತ್ತು. ಇದನ್ನು ವಿರೋಧಿಸಿ ಸರ್ಕಾರ ಹೈಕೋರ್ಟ್‌ ಕದ ತಟ್ಟಿತ್ತು.

ಆದರೆ ನಿಯಮವು ಪಶ್ಚಿಮ ಬಂಗಾಳ ಆರೋಗ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನ್ವಯಿಸುವುದಿಲ್ಲ ಎಂದು ಸೇವಾ ನಿಯಮಗಳಿಗೆ ಮಾಡಲಾದ ತಿದ್ದುಪಡಿಯೊಂದನ್ನು ಟ್ರಿಬ್ಯುನಲ್‌ ಪರಿಗಣಿಸಿಲ್ಲ ಎಂದು ಹೈಕೋರ್ಟ್‌ ಹೇಳಿದೆಯಲ್ಲದೆ "ಈ ತಿದ್ದುಪಡಿ ಪ್ರಕಾರ ಸರ್ಕಾರ ವೈದ್ಯರ ವಿಆರ್‌ಎಸ್‌ ಅರ್ಜಿಯನ್ನು ತಿರಸ್ಕರಿಸಬಹುದು. ವೈದ್ಯರು-ಜನಸಂಖ್ಯೆ ನಡುವಿನ ಅನುಪಾತ ಕಡಿಮೆಯಿದೆ, ಬಡವರು ಚಿಕಿತ್ಸೆಗೆ ಆಗಮಿಸುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ತೀವ್ರ ಕೊರತೆಯಿದೆ," ಎಂದು ಹೈಕೋರ್ಟ್‌ ಹೇಳಿದೆ.

ಇದನ್ನೂ ಓದಿ: ಬಿಜೆಪಿ ಮೈತ್ರಿಕೂಟದ ನಾಗಾಲ್ಯಾಂಡ್ ಸರ್ಕಾರಕ್ಕೆ ಎನ್‌ಸಿಪಿ ಬೆಂಬಲ: ಶರದ್ ಪವಾರ್ ಪವಾರ್

Similar News