ಬಿಜೆಪಿ ಮೈತ್ರಿಕೂಟದ ನಾಗಾಲ್ಯಾಂಡ್ ಸರ್ಕಾರಕ್ಕೆ ಎನ್ಸಿಪಿ ಬೆಂಬಲ: ಶರದ್ ಪವಾರ್ ಪವಾರ್
ಮುಂಬೈ: ನಾಗಾಲ್ಯಾಂಡ್ನಲ್ಲಿ ನಿಂಫು ರಿಯೊ ನೇತೃತ್ವದ ಎನ್ಡಿಪಿಪಿ-ಬಿಜೆಪಿ ಮೈತ್ರಿ ಸರ್ಕಾರವನ್ನು ತಮ್ಮ ಪಕ್ಷ ಬೆಂಬಲಿಸಲಿದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಘೋಷಿಸಿದ್ದಾರೆ. ರಿಯೊ ಜತೆಗೆ ಚುನಾವಣಾ ಪೂರ್ವದಲ್ಲೇ "ಒಪ್ಪಂದ" ಮಾಡಿಕೊಂಡ ಹಿನ್ನೆಲೆಯಲ್ಲಿ ಸರ್ಕಾರವನ್ನು ಬೆಂಬಲಿಸುವುದಾಗಿ ಅವರು ಪ್ರಕಟಿಸಿದ್ದಾರೆ.
ಒಟ್ಟು 60 ಸದಸ್ಯಬಲದ ನಾಲಾಲ್ಯಾಂಡ್ ವಿಧಾನಸಭೆಯಲ್ಲಿ ಎನ್ಡಿಡಿಪಿ-ಬಿಜೆಪಿ ಮೈತ್ರಿಕೂಟ 37 ಸ್ಥಾನಗಳನ್ನು ಹೊಂದಿದ್ದು, ಎನ್ಸಿಪಿಯ ಏಳು ಮಂದಿ ಶಾಸಕರಿದ್ದಾರೆ. "ನಾವು ರಿಯೊ ಜತೆ ಕೈಜೋಡಿಸಿದ್ದೇವೆ; ಬಿಜೆಪಿ ಜತೆಗೆ ಅಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ರಿಯೊ ಜತೆಗೆ ಚುನಾವಣಾ ಪೂರ್ವದಲ್ಲೇ ಹೊಂದಾಣಿಕೆ ಮಾಡಿಕೊಂಡಿದ್ದೆವು. ಆದರೂ ಎನ್ಸಿಪಿ ಸರ್ಕಾರ ಸೇರಬೇಕೇ ಅಥವಾ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕೇ ಎಂಬ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದೆವು. ನಾಗಾಲ್ಯಾಂಡ್ನ ವಿಸ್ತತ ಹಿತಾಸಕ್ತಿಯ ದೃಷ್ಟಿಯಿಂದ ರಿಯೊ ಅವರ ಸರ್ಕಾರ ಬೆಂಬಲಿಸುವ ನಿರ್ಧಾರಕ್ಕೆ ಬಂದಿದ್ದೇವೆ" ಎಂದು ಪವಾರ್ ವಿವರಿಸಿದರು. ಹೊಸದಾಗಿ ಆಯ್ಕೆಯಾದ ಸದಸ್ಯರು, ನಾಗಾಲ್ಯಾಂಡ್ ಹಿತಾಸಕ್ತಿ ದೃಷ್ಟಿಯಿಂದ ಸರ್ಕಾರವನ್ನು ಬೆಂಬಲಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಅಂತಿಮ ನಿರ್ಧಾರವನ್ನು ಪವಾರ್ ಅವರಿಗೆ ಬಿಟ್ಟಿದ್ದರು ಎಂದು ಪಕ್ಷದ ವಕ್ತಾರ ನರೇಂದ್ರ ವರ್ಮಾ ಹೇಳಿದ್ದಾರೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಪವಾರ್, "ರಿಯೊ ಅವರನ್ನು ನಾವು ಬೆಂಬಲಿಸಿದ್ದನ್ನು ಬಿಜೆಪಿಗೆ ಬೆಂಬಲ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತಿದೆ. ಇದು ಸರಿಯಲ್ಲ. ನಾವು ಕೈಜೋಡಿಸಿರುವುದು ರಿಯೋ ಜತೆಗೆಯೇ ವಿನಃ ಬಿಜೆಪಿ ಜತೆಗೆ ಅಲ್ಲ" ಎಂದು ಹೇಳಿದ್ದಾರೆ.