ವಿಧಾನ ಸಭಾ ಚುನಾವಣೆ: ದ.ಕ. ಜಿಲ್ಲೆಯ 4 ಕ್ಷೇತ್ರಗಳಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸ್ಪರ್ಧೆ

Update: 2023-03-09 16:51 GMT

ಮಂಗಳೂರು: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸ್ಪರ್ಧಿಸಲಿದೆ ಎಂದು ಪಕ್ಷದ ದ.ಕ. ಜಿಲ್ಲಾಧ್ಯಕ್ಷ ಸರ್ಫ್ರಾಝ್ ಹೇಳಿದ್ದಾರೆ.

ನಗರದ ಹ್ಯಾಮಿಲ್ಟನ್ ಸರ್ಕಲ್ ಬಳಿಯಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದ ಸ್ಥಾಪನೆಯ ದಿನದಿಂದ ಈವರೆಗೆ ಮೌಲ್ಯಾಧಾರಿತ ರಾಜಕಾರಣಕ್ಕೆ ಒತ್ತು ನೀಡುತ್ತಾ ಬಂದಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ, ಕಲ್ಯಾಣ ರಾಷ್ಟ್ರವೊಂದರ ಪರಿಕಲ್ಪನೆಯ ನಿಟ್ಟಿನಲ್ಲಿ ಜಿಲ್ಲೆಯ 8 ಕ್ಷೇತ್ರದ ಪೈಕಿ ಮಂಗಳೂರು, ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ ಹಾಗೂ ಪುತ್ತೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಶೀಘ್ರ ಪ್ರಕಟಿಸಲಾಗುವುದು ಎಂದರು.

ಜಿಲ್ಲೆಯ ಇತರ 4 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲಾಗುತ್ತದೆ. ಈಗಾಗಲೆ ರಾಜ್ಯಮಟ್ಟದಲ್ಲಿ ಕೆಆರ್‌ಎಸ್, ಜೆಡಿಯು ಸಹಿತ ಐದು ಪ್ರಾದೇಶಿಕ ಪಕ್ಷ ಮತ್ತು ಎಡಪಕ್ಷಗಳಲ್ಲದೆ ರಾಜ್ಯದ 13 ಜನಪರ ಸಂಘಟನೆಗಳ ಜೊತೆ ಚುನಾವಣೆಯ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲಾಗಿದೆ ಎಂದು ಸರ್ಫ್ರಾಝ್ ಹೇಳಿದರು.

ಎಸ್‌ಡಿಪಿಐ ಜೊತೆ ಮೈತ್ರಿಯಿಲ್ಲ: ಪಕ್ಷವು ಯಾವ ಕ್ಷೇತ್ರದಲ್ಲೂ ಕೂಡಾ ಎಸ್‌ಡಿಪಿಐ ಪಕ್ಷದ ಜೊತೆ ಮೈತ್ರಿ ಮಾಡುವುದಿಲ್ಲ. ನಮಗೂ ಎಸ್‌ಡಿಪಿಐ ಪಕ್ಷಕ್ಕೂ ಯಾವುದೇ ಸಂಬಂಧವೂ ಇಲ್ಲ. ಆ ಪಕ್ಷದ ಸಿದ್ಧಾಂತ ನಮಗೆ ಸರಿ ಹೊಂದುವುದಿಲ್ಲ ಎಂದು ಡಬ್ಲ್ಯುಪಿಐ ಪಕ್ಷದ ಮುಖಂಡರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಢಿಯಲ್ಲಿ ಪಕ್ಷದ ಮುಖಂಡರಾದ ಶ್ರೀಕಾಂತ್ ಸಾಲ್ಯಾನ್, ದಿವಾಕರ ರಾವ್ ಬೋಳೂರು, ಸುಲೈಮಾನ್ ಕಲ್ಲರ್ಪೆ, ಸಲಾಂ ಸಿಎಚ್,  ಶರೀಫ್ ಬಿಕ್ಕೋಡಿ, ಮುತ್ತಲಿಬ್ ಮತ್ತಿತರರು ಉಪಸ್ಥಿತರಿದ್ದರು.

Similar News