'ಭಾರತದ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಕೊನೆಯ ದಾಳಿ' ಎಂಬ ನ್ಯೂಯಾರ್ಕ್‌ ಟೈಮ್ಸ್‌ ಲೇಖನಕ್ಕೆ ಕೇಂದ್ರ ಸಚಿವ ಆಕ್ರೋಶ

Update: 2023-03-10 14:13 GMT

ಹೊಸದಿಲ್ಲಿ: 'ದಿ ನ್ಯೂಯಾರ್ಕ್‌ ಟೈಮ್ಸ್‌' ಪತ್ರಿಕೆ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಸನ್ನಿವೇಶದ ಕುರಿತು ಲೇಖನವೊಂದನ್ನು ಪ್ರಕಟಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅನುರಾಗ್‌ ಠಾಕುರ್‌ (Anurag Thakur), ಈ ಲೇಖನ  ದುರುದ್ದೇಶ ಹೊಂದಿದೆ ಎಂದು ಆರೋಪಿಸಿದ್ದಾರಲ್ಲದೆ ಭಾರತದ ಕುರಿತು ಏನನ್ನೇ ಪ್ರಕಟಿಸುವಾಗಲೂ ನ್ಯೂಯಾರ್ಕ್‌ ಟೈಮ್ಸ್‌ (The New York Times) ತನ್ನ ತಟಸ್ಥ ಧೋರಣೆಯ ಎಲ್ಲಾ ತೋರ್ಪಡಿಕೆಗಳನ್ನು ಬಹಳ ಹಿಂದೆಯೇ ಕೈಬಿಟ್ಟಿದೆ ಎಂದು ಹೇಳಿದ್ದಾರೆ.

"ಕಾಶ್ಮೀರದಲ್ಲಿನ ಮಾಧ್ಯಮ ಸ್ವಾತಂತ್ರ್ಯ ಕುರಿತು ನ್ಯೂಯಾರ್ಕ್‌ ಟೈಮ್ಸ್‌ ಲೇಖನವು ಭಾರತ, ಅದರ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಮೌಲ್ಯಗಳ ವಿರುದ್ಧ ಅಪಪ್ರಚಾರ ಮಾಡಿದೆ. ನ್ಯೂಯಾರ್ಕ್‌ ಟೈಮ್ಸ್‌ ಮತ್ತು ಕೆಲ ಸಮಾನಮನಸ್ಕ ವಿದೇಶಿ ಮಾಧ್ಯಮಗಳು ಭಾರತ ಮತ್ತು ನಮ್ಮ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ಕುರಿತು ಸುಳ್ಳುಗಳನ್ನು ಹರಡುವುದರ ಮುಂದುವರಿದ ಭಾಗವಾಗಿದೆ. ಇಂತಹ ಸುಳ್ಳುಗಳು ಹೆಚ್ಚು ಕಾಲ ಉಳಿಯದು," ಎಂದು ಠಾಕುರ್‌ ತಮ್ಮ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

ಕಾಶ್ಮೀರದಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ನ್ಯೂಯಾರ್ಕ್‌ ಟೈಮ್ಸ್‌ ಸುಳ್ಳು ಹರಡುತ್ತಿರುವುದು ಖಂಡನಾರ್ಹ ಎಂದೂ ಠಾಕುರ್‌ ಹೇಳಿದ್ದಾರೆ.

"ಮೋದೀಸ್‌ ಫೈನಲ್‌ ಅಸ್ಸಾಲ್ಟ್‌ ಆನ್‌ ಇಂಡಿಯಾಸ್‌ ಫ್ರೀಡಂ ಹ್ಯಾಸ್‌ ಜಸ್ಟ್‌ ಬಿಗನ್"‌ ಎಂಬ ಹೆಸರಿನ ಈ ಲೇಖನವನ್ನು 'ದಿ ಕಾಶ್ಮೀರ್‌ ಟೈಮ್ಸ್‌' ಕಾರ್ಯಕಾರಿ ಸಂಪಾದಕ ಅನುರಾಧ ಭಾಸಿನ್‌ ಬರೆದಿದ್ದರು.

ಅಕ್ಟೋಬರ್‌ 19, 2020 ರಲ್ಲಿ 'ದಿ ಕಾಶ್ಮೀರ್‌ ಟೈಮ್ಸ್‌' ಕಚೇರಿಗೆ ಪೊಲೀಸರು ಆಗಮಿಸಿ ಅದಕ್ಕೆ ಜಡಿದ ಬೀಗ ಈಗಲೂ ಹಾಗೆಯೇ ಇದೆ ಎಂದು ಲೇಖನದಲ್ಲಿ ಬರೆದಿರುವ ಭಾಸಿನ್‌ ಈ ದಾಳಿಯು ತಮ್ಮ ಪ್ರಕಾರ ತಾವು ಪ್ರಧಾನಿ ಮೋದಿಯ ನೀತಿಗಳನ್ನು ಪ್ರಶ್ನಿಸಿದ್ದಕ್ಕೆ ಶಿಕ್ಷೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅದಾನಿ ಗ್ರೂಪ್ ನ ಮೂರು ಕಂಪನಿ ಶೇರುಗಳನ್ನು ಅಲ್ಪಾವಧಿ ನಿಗಾದಡಿ ಇರಿಸಿದ ಎನ್ಎಸ್ಇ

Similar News