×
Ad

ನ್ಯಾಯಾಧೀಶೆಯನ್ನು ಭಸ್ಮಾಸುರ ಎಂದು ಕರೆದ ವಕೀಲನಿಗೆ ಶಿಕ್ಷೆ

Update: 2023-03-11 07:42 IST

ಗುವಾಹತಿ: ಅಧೀನ ನ್ಯಾಯಾಲಯದ ನ್ಯಾಯಾಧೀಶೆಯೊಬ್ಬರ ಆಭರಣದ ಬಗ್ಗೆ ಪ್ರತಿಕ್ರಿಯಿಸಿ ಅವರನ್ನು "ಪೌರಾಣಿಕ ಪಾತ್ರ" (ರಾಕ್ಷಸ) ಕ್ಕೆ ಹೋಲಿಸಿದ ವಕೀಲನೊಬ್ಬನಿಗೆ ಶಿಕ್ಷೆ ವಿಧಿಸಿ ಗುವಾಹತಿ ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಕಲ್ಯಾಣ್ ರಾಯ್ ಸುರಾನಾ ಮತ್ತು ದೇವಾಶಿಶ್ ಬರೂವಾ ಅವರು ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ನಡೆಸಿ, ವಕೀಲನಿಗೆ 10 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿದೆ. ತಪ್ಪಿತಸ್ಥ ವಕೀಲನಿಗೆ ಶಿಕ್ಷೆ ವಿಧಿಸುವ ಸಂಬಂಧ ಮಾರ್ಚ್ 20ರಂದು ವಿಚಾರಣೆ ನಡೆಸಲಿದೆ.

ವಕೀಲ ಉತ್ಪಲ್ ಗೋಸ್ವಾಮಿ ವಿರುದ್ಧ ನ್ಯಾಯಾಲಯ ನಿಂದನೆ ಕಾಯ್ದೆ-1971ರ ಸೆಕ್ಷನ್ 14ರ ಅನ್ವಯ ಕ್ರಿಮಿನಲ್ ನಿಂದನೆ ಆರೋಪ ಹೊರಿಸಲಾಗತ್ತು. "ಈ ನ್ಯಾಯಾಂಗ ಅಧಿಕಾರಿಯ ಬಗ್ಗೆ ಹಲವು ಇತರ ಆರೋಪಗಳನ್ನೂ ಮಾಡಲಾಗಿದ್ದು, ಅವರು ಕಾನೂನನ್ನು ಅರ್ಥ ಮಾಡಿಕೊಂಡ ವಿಧಾನದ ಬಗ್ಗೆಯೂ ವಕೀಲ ವಾಗ್ದಾಳಿ ನಡೆಸಿದ್ದ. ಇದರ ಜತೆಗೆ ಅವರನ್ನು ಮಹಾಭಾರತದ ಪೌರಾಣಿಕ ಪಾತ್ರವಾದ ಭಸ್ಮಾಸುರನಿಗೆ ಹೋಲಿಸುವ ಮೂಲಕ ವೈಯಕ್ತಿಕವಾಗಿಯೂ ದಾಳಿ ನಡೆಸಿದ್ದಾನೆ" ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಜನವರಿ 17ರಂದು ವಕೀಲನ ಪರ ಸಲ್ಲಿಸಲಾಗಿದ್ದ ಅಫಿಡವಿಟ್‍ನಲ್ಲಿ ಆರೋಪದ ಬಗ್ಗೆ ವಕೀಲ ತಪ್ಪೊಪ್ಪಿಕೊಂಡಿದ್ದ. ನ್ಯಾಯಾಧೀಶರು ಮತ್ತು ಮ್ಯಾಜಿಸ್ಟ್ರೇಟರ ಘನತೆಯನ್ನು ಕಾಪಾಡುವುದು ಮಾನವ ಸಮಾಜದಲ್ಲಿ ಅಗತ್ಯ ಎನ್ನುವುದು ಮನವರಿಕೆಯಾಗಿದೆ ಎಂದು ಸ್ಪಷ್ಟಪಡಿಸಲಾಗಿತ್ತು.

Similar News