×
Ad

​ತ್ರಿಪುರಾ: ಚುನಾವಣೋತ್ತರ ಹಿಂಸೆ ತನಿಖೆಗೆ ಆಗಮಿಸಿದ್ದ ಸಂಸದೀಯ ತಂಡದ ಮೇಲೆ ಹಲ್ಲೆ

Update: 2023-03-11 07:45 IST

ಗುವಾಹತಿ: ಬಿಜೆಪಿ ಆಡಳಿತದ ತ್ರಿಪುರಾದಲ್ಲಿ ನಡೆದ ಚುನಾವಣೋತ್ತರ ಹಿಂಸೆಯ ಬಗ್ಗೆ ತನಿಖೆ ನಡೆಸಲು ಮತ್ತು ಸಂತ್ರಸ್ತ ಜನರ ಜತೆ ಮಾತುಕತೆಗೆ ಆಗಮಿಸಿದ್ದ ಸಂಸದೀಯ ತಂಡದ ಮೇಲೆ ಶುಕ್ರವಾರ ಹಲ್ಲೆ ನಡೆದಿದೆ. ತಂಡ ಎರಡು ದಿನಗಳ ಭೇಟಿಗಾಗಿ ಆಗಮಿಸಿತ್ತು.

ಶುಕ್ರವಾರ ಸಂಜೆ ಬಿಸಾಲಗಢದ ನೆಹಲ್‍ಚಂದ್ರ ನಗರ ಬಜಾರ್ ಪ್ರದೇಶದಲ್ಲಿ ನಡೆದ ಈ ಭಯಾನಕ ದಾಳಿಯ ಹಿನ್ನೆಲೆಯಲ್ಲಿ ಸಂಸದೀಯ ತಂಡ ಶನಿವಾರ ನಡೆಯಬೇಕಿದ್ದ ಉಳಿಕೆ ಹೊರಾಂಗಣ ಕಾರ್ಯಾಕ್ರಮಗಳನ್ನು ರದ್ದುಪಡಿಸುವುದು ಅನಿವಾರ್ಯವಾಗಿದೆ ಎಂದು ಸಿಪಿಐ(ಎಂ) ತ್ರಿಪುರಾ ರಾಜ್ಯ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಜಿತೇಂದ್ರ ಚೌಧರಿ ಹೇಳಿದ್ದಾರೆ.

ಸೆಪಾಹಿಜಾಲ ಜಿಲ್ಲೆಯ ಬಿಶಾಲಗಢ ಪಟ್ಟಣದ ಹಿಂಸಾಪೀಡಿತ ಪ್ರದೇಶಕ್ಕೆ ಸಂಸದೀಯ ತಂಡ ತೆರಳಿದ್ದಾಗ, ಆಡಳಿತಾರೂಢ ಬಿಜೆಪಿ ಬೆಂಬಲಿತ ವ್ಯಕ್ತಿಗಳು ದಾಳಿ ನಡೆಸಿ ವಾಹನಗಳನ್ನು ಜಖಂಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಸಿಪಿಐಎಂ ಆಪಾದಿಸಿವೆ.

"ಸಂಸದರು ಮತ್ತು ಅವರ ಜತೆಗಿದ್ದ ಕಾಂಗ್ರೆಸ್ ಹಾಗೂ ಸಿಪಿಐಎಂ ನಾಯಕರು ತಕ್ಷಣ ಅಲ್ಲಿಂದ ಹೊರಟ ಕಾರಣ ದೊಡ್ಡ ದಾಳಿಯಿಂದ ತಪ್ಪಿಸಿಕೊಂಡಂತಾಗಿದೆ" ಎಂದು ಸಿಪಿಐಎಂ ಹೇಳಿಕೆ ನೀಡಿದೆ. ಪಶ್ಚಿಮ ತ್ರಿಪುರಾದ ಮೋಹನಪುರಕ್ಕೆ ಆಗಮಿಸಿದ್ದ ಸಂಸದೀಯ ತಂಡಕ್ಕೂ ಬಿಜೆಪಿ ಕಾರ್ಯಕರ್ತರು ತಡೆ ಒಡ್ಡಿದ್ದಾರೆ.

ಸ್ಥಳೀಯ ಶಾಸಕರು ಮತ್ತು ಮುಖಂಡರ ಜತೆ ಸಂಸದರು ನೇಹಲ್‍ಚಂದ್ರ ನಗರಕ್ಕೆ ಆಗಮಿಸಿದಾಗ ಅವರ ವಿರುದ್ಧ ಘೋಷಣೆ ಕೂಗಲಾಯಿತು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಜತೆಗೆ ಇದ್ದ ಪೊಲೀಸ್ ಬೆಂಗಾವಲು ವಾಹನ ತಕ್ಷಣ ನೆರವಿಗೆ ಧಾವಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿತು. ಯಾರಿಗೂ ಗಾಯಗಳಾಗಿಲ್ಲ. 2-3 ವಾಹನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಒಬ್ಬ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಇತರ ಕಿಡಿಗೇಡಿಗಳ ಬಂಧನಕ್ಕೆ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

Similar News