ಬೇರೆಯವರೊಂದಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮಾತನಾಡುತ್ತಿದ್ದಾಳೆಂದು ಗೆಳತಿಯನ್ನು ಕೊಂದ 17 ವರ್ಷದ ಬಾಲಕ

Update: 2023-03-11 09:17 GMT

ಗೊಡ್ಡಾ: ತನ್ನ ಗೆಳತಿಯು ಬೇರೆ ಹುಡುಗನೊಂದಿಗೆ ಇನ್ಸ್ಟಾಗ್ರಾಮ್‌ನಲ್ಲಿ (Instagram) ಮಾತುಕತೆ ನಡೆಸುತ್ತಿದ್ದಾಳೆ ಎಂಬ ಸಂಗತಿ ಅರಿವಿಗೆ ಬಂದ ನಂತರ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ಕಬ್ಬಿಣದ ಸರಳಿನಲ್ಲಿ ಆಕೆಯ ತಲೆಗೆ ಹೊಡೆದು ಹತ್ಯೆಗೈದಿದ್ದಾನೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಹೋಳಿ ದಿನದಂದು ಕಾಣೆಯಾಗಿದ್ದ ಆ ಬಾಲಕಿಯು ಗುರುವಾರದಂದು ಝಾರ್ಖಂಡ್‌ನ ಗೊಡ್ಡಾ ಜಿಲ್ಲೆಯ ಬಯಲೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಅವರು ಹೇಳಿದ್ದಾರೆ.

ಊರ್ಜಾನಗರದ ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಯೊಂದರಲ್ಲಿ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಹಾಗೂ ಬಾಲಕಿ ನಡುವೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. 

ಈ ಕುರಿತು ಮಾಹಿತಿ ನೀಡಿರುವ ಗೊಡ್ಡಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನಾಥು ಸಿಂಗ್ ಮೀನಾ, "ಬಾಲಕಿಯು ಮತ್ತೊಬ್ಬ ಬಾಲಕನೊಂದಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮಾತುಕತೆ ನಡೆಸುತ್ತಿದ್ದಾಳೆ ಎಂಬ ಸಂಗತಿ ತಿಳಿದು ಕ್ರೋಧಗೊಂಡಿರುವ ಬಾಲಕನು, ಬುಧವಾರ ಸಂಜೆ ತನ್ನ ಗೆಳತಿಯ ಮನೆಗೆ ಹೋಳಿ ಹಬ್ಬ ಆಚರಿಸಲು ತೆರಳುತ್ತಿದ್ದ ಬಾಲಕಿಯನ್ನು ಮಾರ್ಗಮಧ್ಯದಲ್ಲಿ ತಡೆದು, ಆಕೆಯ ತಲೆಗೆ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದಾನೆ" ಎಂದು ತಿಳಿಸಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ಬಾಲಕನು ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಬಾಲಕಿಯ ಮೃತದೇಹ ದೊರೆತ ಸ್ಥಳದಿಂದ ಕೆಲ ಮೀಟರ್‌ಗಳ ದೂರದಲ್ಲಿ ಅಪರಾಧಕ್ಕೆ ಬಳಸಲಾದ ಕಬ್ಬಿಣದ ಸರಳು ಹಾಗೂ ಬಾಲಕಿಯ ಮೊಬೈಲ್ ಫೋನ್ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಲು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಶಿವ್ ಶಂಕರ್ ತಿವಾರಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಆರೋಪಿ ಬಾಲಕನನ್ನು ಬಾಲಾಪರಾಧಿ ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದು ಮೀನಾ ಹೇಳಿದ್ದಾರೆ.

ಇದನ್ನೂ ಓದಿ: ಹೋಳಿ ಹಬ್ಬದಂದು ಕಿರುಕುಳ: ಭಾರತ ತೊರೆದ ಜಪಾನ್ ಯುವತಿ

Similar News