ರಾಬರಿ ಕಥೆ-ವ್ಯಥೆ

Update: 2023-03-12 08:55 GMT

ಸ್ಯಾಂಡಲ್‌ವುಡ್‌ನ ಥಿಯೇಟರ್ ಅಂಗಳದಲ್ಲಿ ಒಮ್ಮೊಮ್ಮೆ ಸಿನೆಮಾಗಳ ಸುನಾಮಿ ಇದ್ದರೆ, ಇನ್ನೊಮ್ಮೆ ಸಿನೆಮಾಗಳನ್ನು ಹುಡುಕಬೇಕಾಗುತ್ತದೆ. ಕಳೆದ ವಾರ ನಾ ಮುಂದು ತಾ ಮುಂದು ಎಂದು ತಮ್ಮ ತಮ್ಮ ಸಿನೆಮಾಗಳನ್ನು ರಿಲೀಸ್ ಮಾಡಿದ ಚಿತ್ರ ನಿರ್ಮಾಪಕರು ಯಾಕೋ ಈ ವಾರ ಸ್ವಲ್ಪತಣ್ಣಗಾಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನೆಮಾ ಬಿಟ್ಟರೆ ಬೇರೆ ಯಾವ ಸಿನೆಮಾ ಕೂಡ ರಿಲೀಸ್ ಆಗಿಲ್ಲ. ಹಾಗೆ ರಿಲೀಸ್ ಆದ ಸಿನೆಮಾಗಳಲ್ಲಿ ಈ ವಾರ ಗಮನ ಸೆಳೆಯುತ್ತಿರುವುದು ‘1 ರಾಬರಿ ಕಥೆ’. ಟೈಟಲ್‌ನಲ್ಲೇ ಕಳ್ಳತನದ ಕಥೆ ಹೊತ್ತು ಬಂದಿರುವ ಈ ಸಿನೆಮಾ ಥಿಯೇಟರಿನಲ್ಲೂ ಪ್ರೇಕ್ಷಕರ ಮನಸ್ಸನ್ನು ರಾಬರಿ ಮಾಡೀತೆ ಎಂಬ ಕುತೂಹಲ ಇದ್ದರೆ, ನೀವು ಥಿಯೇಟರಿಗೇ ಹೋಗಿ ಸಿನೆಮಾ ನೋಡಬೇಕು.

‘1 ರಾಬರಿ ಕಥೆ’. ಇದು ಸಂಪೂರ್ಣ ಮಾಸ್ ಎಲಿಮೆಂಟ್ ಜೊತೆ ಬಂದಿರುವ ಸಿನೆಮಾ. ಮನಿ ಈಸ್ ಆಲ್ವೇಸ್ ಅಲ್ಟಿಮೇಟ್ ಎಂಬ ಮನಃಸ್ಥಿತಿಗಳನ್ನು ಇಟ್ಟುಕೊಂಡು ಸಿನೆಮಾ ಮಾಡಿದ್ದಾರೆ ನಿರ್ದೇಶಕ ಗೋಪಾಲ್ ಹೊನ್ನಾವರ. ದುಡ್ಡೇ ದೊಡ್ಡಪ್ಪಎಂಬ ಜನಗಳ ಮಧ್ಯೆ ಸಂಬಂಧಕ್ಕೂ ಬೆಲೆ ಕೊಡಿ ಎಂದು ಹೋರಾಡುವವರು ಇದ್ದರೆ ಅವರ ಪರಿಸ್ಥಿತಿ ಏನಾಗುತ್ತದೆ? ಅಂಥ ಜನಗಳ ಮಧ್ಯೆ ಬದುಕುತ್ತಾ ಹೋರಾಟದ ಮನೋಭಾವವೇ ನಶಿಸಿಹೋಗುತ್ತದೆ ಎಂಬ ಎಳೆಯನ್ನು ಇಟ್ಟುಕೊಂಡು ಸಿನೆಮಾ ಮಾಡಿದ್ಧಾರೆ. ಹೊಸ ನಾಯಕ, ನಾಯಕಿ ಈ ಸಿನೆಮಾಗಾಗಿ ಬಣ್ಣ ಹಚ್ಚಿದ್ದು, ಇದು ಪಕ್ಕಾ ಹೊಸಬರ ಸಿನೆಮಾ ಎಂಬುದು ಮೊದಲ ನೋಟಕ್ಕೇ ಪ್ರೇಕ್ಷಕರಿಗೆ ಗೊತ್ತಾಗಿಬಿಡುತ್ತದೆ.

ದುಡ್ಡು ದುಡ್ಡು ಅನ್ನುವ ಮಂದಿಯಿಂದ ಅನ್ಯಾಯಕ್ಕೊಳಗಾಗುವ ನಾಯಕ ಅದೇ ದುಡ್ಡಿನ ಹಿಂದೆ ಬಿದ್ದರೆ ಏನಾಗುತ್ತದೆ? ಸಂಬಂಧಕ್ಕೆ ಬೆಲೆ ಕೊಡುವ ಮನುಷ್ಯ ದುಡ್ಡಿಗೆ ಬೆಲೆ ಕೊಟ್ಟರೆ ಎಂಥ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಸುತ್ತ ಈ ಸಿನೆಮಾದ ಕಥೆ ಸುತ್ತುತ್ತದೆ. ಪೊಲೀಸರ ದೌರ್ಜನ್ಯದಿಂದ ತಂದೆ ತಾಯಿಗಳನ್ನು ಕಳೆದುಕೊಳ್ಳುವ ನಾಯಕನಾಗಿ ರಣಧೀರ್ ಗೌಡ ನಟಿಸಿದ್ದಾರೆ. ನಾಯಕನ ನಟನೆಯಲ್ಲಿ ರೋಷ, ಆಕ್ರೋಶ, ಪ್ರೀತಿ, ಬಾಂಧವ್ಯ ಎಲ್ಲಾ ಭಾವನೆಗಳು ವ್ಯಕ್ತವಾದರೂ, ಅಭಿನಯದ ಕಡೆ ಇನ್ನೂ ಸ್ವಲ್ಪ ಗಮನ ಕೊಟ್ಟಿದ್ದರೆ, ಪಾತ್ರಕ್ಕೆ ಇನ್ನೂ ಕಳೆ ಬಂದಿರುತ್ತಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ.

ನಾಯಕಿಯಾಗಿ ರಿಶ್ವಿ ಭಟ್ ಅಭಿನಯಿಸಿದ್ಧಾರೆ. ಪ್ರಮುಖ ಪಾತ್ರದಲ್ಲಿ ಸುಂದರ್ ರಾಜ್ ಗಮನ ಸೆಳೆಯುತ್ತಾರೆ. ಗಂಭೀರವಾಗಿ ಸಾಗುವ ಕಥೆಯ ಮಧ್ಯೆ ಹಾಸ್ಯದ ಹೊನಲು ಹರಿಸುತ್ತಾರೆ ನಟ ಶಿವರಾಜ್ ಕೆ.ಆರ್.ಪೇಟೆ. ಶ್ರೀಮಂತಿಕೆಯ ಹುಚ್ಚು ಹಿಡಿದರೆ ಮನುಷ್ಯ ಹೇಗೆಲ್ಲಾ ದಾರಿ ತಪ್ಪುತ್ತಾನೆ ಎನ್ನುವುದನ್ನು ಈ ಸಿನೆಮಾ ಮೂಲಕ ತೋರಿಸಿದ್ದಾರೆ. ರಾಬರಿ ಕಥೆಯಾದರೂ ಯಾವುದೇ ಕಮರ್ಷಿಯಲ್ ಸಿನೆಮಾಗಳಿಗೂ ಕಡಿಮೆ ಇಲ್ಲದ ಹಾಗೆ ಎಲ್ಲಾ ಅಂಶಗಳನ್ನೂ ಈ ಸಿನೆಮಾದಲ್ಲಿ ತೋರಿಸಿದ್ದಾರೆ ನಿರ್ದೇಶಕರು.

ಇಲ್ಲೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಇದೆ. ಜೊತೆಗೆ ಸಂಬಂಧಗಳ ಮಹತ್ವವಿದೆ. ಅಲ್ಲಲ್ಲಿ ಕಾಮಿಡಿ, ಅಲ್ಲಲ್ಲಿ ಡೈಲಾಗ್ ಪಂಚ್ ಜೊತೆಗೆ ಹಠ, ಸೇಡು ಎಲ್ಲವೂ ಬಂದುಹೋಗುತ್ತದೆ. ಹೊಸಬರ ಸಿನೆಮಾ ಅನ್ನುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನೆಮಾ ನೋಡಿದರೆ ಪ್ರೇಕ್ಷಕರಿಗೆ ಯಾವುದೇ ನಿರಾಸೆಯಾಗದು. ಆದರೂ ಸಿನೆಮಾದ ಕ್ಲೈಮ್ಯಾಕ್ಸ್ ಬಗ್ಗೆ ಪ್ರೇಕ್ಷಕರು ಸ್ವಲ್ಪಬೇಸರ ವ್ಯಕ್ತಪಡಿಸುತ್ತಾರೆ. ಅಂಥ ಒಂದು ಸೀನ್ ಬೇಕಾಗಿರಲಿಲ್ಲ ಅನ್ನೋ ಅಭಿಪ್ರಾಯ ಕೂಡ ವ್ಯಕ್ತವಾಗುತ್ತದೆ. ಏನು ಆ ದೃಶ್ಯ? ಯಾಕೆ ಬೇಡವಾಗಿತ್ತು? ಅದನ್ನು ಸಿನೆಮಾ ನೋಡಿಯೇ ತಿಳಿಯಬೇಕು.ಎನ್ನುವ ಮೆಸೇಜ್ ಪ್ರೇಕ್ಷಕರಿಗೆ ತಲುಪಿದೆ.

Similar News