×
Ad

ಓರ್ವ ತಂದೆಯಾಗಿ, ನನ್ನ ಪುತ್ರಿ ಖದೀಜಾಳ ಬಗ್ಗೆ ನನಗೆ ಹೆಮ್ಮೆಯಿದೆ, ಆಕೆ ಅದ್ಭುತ ವ್ಯಕ್ತಿ: ಎ.ಆರ್‌. ರಹಮಾನ್

ಸಂದರ್ಶನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹೇಳಿದ್ದೇನು?

Update: 2023-03-12 15:05 IST

ಚೆನ್ನೈ: "ನನ್ನ ಪುತ್ರಿಗೆ ತನ್ನದೇ ಸ್ವಂತ ವ್ಯಕ್ತಿತ್ವವಿದ್ದು, ಆಕೆ ತನ್ನೆಲ್ಲ ಯುದ್ಧಗಳಲ್ಲಿ ತಾನೇ ಹೋರಾಡಿದ್ದಾಳೆ" ಎಂದು ಬುರ್ಖಾ ಧರಿಸಿದ್ದಕ್ಕೆ ಅಂತರ್ಜಾಲ ತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿರುವ ತನ್ನ ಪುತ್ರಿ ಖತೀಜಾ ಬಗ್ಗೆ ಮೇರು ಸಂಗೀತ ನಿರ್ದೇಶಕ ಎ.ಆರ್‌‌.ರೆಹಮಾನ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರೆಹಮಾನ್, "ಒಂದು ವೇಳೆ ರಾಜಮೌಳಿ ನಿರ್ದೇಶನದ 'RRR' ಸಿನಿಮಾದ 'ನಾಟು ನಾಟು' ಗೀತೆಗೇನಾದರೂ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ದೊರೆತರೆ ಭಾರತವು ಕಲೆ ಮತ್ತು ಸಂಸ್ಕೃತಿಯಲ್ಲಿ ಮುಂಚೂಣಿಗೆ ಬಂದು ನಿಲ್ಲಲಿದೆ. 95ನೇ ಸಾಲಿನ ಆಸ್ಕರ್ ಪ್ರಶಸ್ತಿಯ ಅಂತಿಮ ಪಟ್ಟಿಯ ಮೂಲ ಗೀತೆ ವಿಭಾಗದಲ್ಲಿ ಈ ಗೀತೆ ಸ್ಥಾನ ಪಡೆದಿದೆ" ಎಂದು ಹೇಳಿದ್ದಾರೆ.

ಸಿನಿಮಾವನ್ನು ಸಾಕಾರಗೊಳಿಸುವ ಸಿನಿಮಾ ಉದ್ಯಮದ ಪ್ರತಿ ಘಟಕಕ್ಕೂ ಸುರಕ್ಷತೆ ಹಾಗೂ ಭದ್ರತೆಯನ್ನು ಖಾತರಿಗೊಳಿಸಬೇಕಾದ ಅಗತ್ಯವಿದೆ ಎಂದು ಅವರು ಸಂದರ್ಶನದಲ್ಲಿ ಪ್ರತಿಪಾದಿಸಿದ್ದಾರೆ. ಹೀಗಾಗಿಯೇ ನಾನು ತಮಿಳು ಚಿತ್ರರಂಗದಲ್ಲಿ ಬೆಳಕು ವಿನ್ಯಾಸಕಾರರ ಪರ ವಹಿಸಿದೆ ಎಂದು ತಮ್ಮ ಖಾಸಗಿ ವಿಷಯವನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದ ಆಯ್ದ ಭಾಗಗಳು:

ಪ್ರ: ಇತ್ತೀಚೆಗೆ ನೀವು ಯಾವ ಬಗೆಯ ಗೀತೆಗಳನ್ನು ಕೇಳುತ್ತಿದ್ದೀರಿ?

ಉ: ನಾನು ನನ್ನದೇ ಸಂಗೀತ ಸಂಯೋಜನೆಯ ಪೊಣ್ಣಿಯಾನ್ ಸೆಲ್ವನ್ ಚಿತ್ರದ 'ನಾಗಾ ನಾಗಾ' ಗೀತೆ ಹಾಗೂ ನನ್ನ ಪುತ್ರ ಅಮೀನ್‌ ಸಂಯೋಜಿಸಿರುವ ಗೀತೆಗಳನ್ನು ಕೇಳುತ್ತಿದ್ದೇನೆ.

ಪ್ರ: ಸಿನಿಮಾ ಉದ್ಯಮದಲ್ಲಿ ಹಲವಾರು ನಿರ್ಮಾಣ ಘಟಕಗಳಿದ್ದರೂ, ನೀವು ನಿರ್ದಿಷ್ಟವಾಗಿ ಬೆಳಕು ವಿನ್ಯಾಸಕಾರರ ಪರವಾಗಿ ಯಾಕೆ ನಿಧಿ ಸಂಗ್ರಹಿಸುತ್ತಿದ್ದೀರಿ?

ಉ: ಇತ್ತೀಚೆಗೆ ಓರ್ವ ಬೆಳಕಿನ ವಿನ್ಯಾಸಕಾರ ಮೃತಪಟ್ಟ. ಅದರಿಂದ ತೀವ್ರವಾಗಿ ಆಘಾತಕ್ಕೊಳಗಾದ ನಾನು, ಲಂಡನ್‌ನಲ್ಲಿದ್ದಾಗ ಕೆಲ ದಿನಗಳ ಕಾಲ ನಿದ್ದೆಯನ್ನೇ ಮಾಡಲು ಸಾಧ್ಯವಾಗಲಿಲ್ಲ. ನಾನು ಅದರಿಂದ ತೀವ್ರ ಪ್ರಕ್ಷುಬ್ಧನಾದೆ ಮತ್ತು ನಾನು ನನ್ನ ಸಹೋದರನನ್ನು ಕಳೆದುಕೊಂಡ ಭಾವನೆಯನ್ನು ಅನುಭವಿಸಿದೆ. ಮೃತ ವ್ಯಕ್ತಿಗೆ ಏನು ನೆರವು ನೀಡುತ್ತಿದ್ದೀರಿ ಎಂದು ಸಂಘಟನೆಯವರನ್ನು ವಿಚಾರಿಸಿದಾಗ, ನಾನು ಸಣ್ಣವನಾಗಿದ್ದಾಗ ಮೃತಪಟ್ಟ ನನ್ನ ತಂದೆಯೂ ಸೇರಿದಂತೆ ಈವರೆಗೆ ಸಾವನ್ನಪ್ಪಿರುವ ಎಲ್ಲರೂ ಯಾವುದೇ ಜೀವ ವಿಮೆ, ಅಂತರ್ಜಾಲ ತಾಣ, ಸುರಕ್ಷತಾ ಸಲಕರಣೆಗಳಿಲ್ಲದೆ ಮೃತಪಟ್ಟಿರುವುದು ಹಾಗೂ ತಮ್ಮ ಬಳಿ ಏನೂ ಇಲ್ಲದ ಸ್ಥಿತಿಯಲ್ಲಿದ್ದದ್ದನ್ನು ಪತ್ತೆ ಮಾಡಿದೆ.

ಒಂದು ಉದ್ಯಮವಾಗಿ ನಾವು ರೂ. 20 ಕೋಟಿಯಿಂದ ರೂ. 1,000 ಕೋಟಿಗೆ ಬೆಳೆದಿದ್ದರೂ, ಪ್ರತಿಯೊಬ್ಬರೂ ಬೇರೆ ಯಾರಾದರೂ ಅದನ್ನು ಮಾಡುತ್ತಾರೆ ಎಂದೇ ಭಾವಿಸುತ್ತಾರೆ. ನಾವು ನಮ್ಮ ಜನರನ್ನು ಒಗ್ಗೂಡಿಸಿದೆವು ಮತ್ತು ಗಮನಾರ್ಹ ಸಂಗತಿಯೆಂದರೆ, ಅವರಿಗೆ ಯಾವುದೇ ಧ್ವನಿ ಇಲ್ಲ. ನಾವು ಅವರಿಗೆ ಧ್ವನಿ ನೀಡಬೇಕಿದೆ, ಅವರನ್ನು ಮನುಷ್ಯರಂತೆ ನೋಡಬೇಕಿದೆ.

ಪ್ರತಿ ತಿಂಗಳೂ ಇಬ್ಬರು ಅಥವಾ ಮೂರು ಮಂದಿ ಗಮನಕ್ಕೇ ಬಾರದಂತೆ ಮೃತರಾಗುತ್ತಿದ್ದಾರೆ. ಅವರು ವಾಹನದಲ್ಲಿ ಲೈಟ್‌ಗಳನ್ನು ತುಂಬುವಾಗ, ಅವು ಅವರ ತಲೆಯ ಮೇಲೆ ಬಿದ್ದು ಅಪ್ಪಚ್ಚಿಯಾಗುತ್ತಿದ್ದಾರೆ, ಕೆಲವು ವ್ಯಕ್ತಿಗಳು ತಮ್ಮ ಕೈ ಕಳೆದುಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಅಮಾನವೀಯ. ಅದು ಉದ್ದೇಶಪೂರ್ವಕವಲ್ಲದಿದ್ದರೂ, ನಾವದನ್ನು ಗುರುತಿಸಬೇಕಾದ ಸಮಯ ಇದಾಗಿದೆ. ಇತ್ತೀಚೆಗೆ ನನ್ನ ಪುತ್ರ ಕೂಡಾ ಅಪಘಾತಕ್ಕೆ ಸಿಲುಕಿ, ಸ್ವಲ್ಪದರಲ್ಲೇ ಪಾರಾದ. ನಮ್ಮನ್ನು ಚೆನ್ನಾಗಿ ಕಾಣುವಂತೆ ಮಾಡುವ ವ್ಯಕ್ತಿಗಳ ಜೀವದ ಸುರಕ್ಷತೆ ಬಗ್ಗೆ ಗಮನ ನೀಡಬೇಕಾದ ಸಮಯ ಇದಾಗಿದೆ.

ಪ್ರ: ಪಾಪ್ ಸಂಗೀತ ಗೋಷ್ಠಿಯಿಂದ ಸೂಫಿ ಸಂಗೀತ ಗೋಷ್ಠಿಗೇ ವಿಮುಖವಾಗಿದ್ದೇಕೆ?

ಉ: ಚೆನ್ನೈನಲ್ಲಿ ಈ ಬಗೆಯ ಸೂಫಿ ಸಂಗೀತ ಗೋಷ್ಠಿಯನ್ನು ಆಲಿಸುವ ಅನೇಕ ಜನರಿದ್ದಾರೆ. ಅವರು ಹಲವಾರು ವರ್ಷಗಳಿಂದ ನನ್ನನ್ನು ಈ ಕುರಿತು ಕೇಳುತ್ತಿದ್ದರು. ಇದರಿಂದ ರಂಜನೆ ಪಡೆಯಲು ಹಾಗೂ ಮನುಷ್ಯರಿಗೆ ಅಗತ್ಯವಿರುವ ಅಪಾರ ಪ್ರೀತಿಯ ಬಗ್ಗೆ ಜಾಗೃತಿ ಮೂಡಿಸಲು ಈ ಆಯ್ಕೆ ಮಾಡಿಕೊಂಡೆ.

ಪ್ರ: ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ 'ನಾಟು,ನಾಟು' ಗೀತೆಯ ಬಗ್ಗೆ ನಿಮ್ಮ ನಿರೀಕ್ಷೆಗಳೇನು?

ಉ: ಅದು ಭಾರತದ ವ್ಯಕ್ತಿತ್ವ ಚಿತ್ರಣವಾಗಲಿದೆ ಮತ್ತು ಭಾರತದ ವ್ಯಕ್ತಿತ್ವ ಚಿತ್ರಣವನ್ನು ವೃದ್ಧಿಸಲಿದೆ. ಅದು ಭಾರತದ ರಾಯಭಾರಿ ಆಗಲಿದೆ. 'ಜೈ ಹೊ' ಗೀತೆ ಆಸ್ಕರ್ ಪ್ರಶಸ್ತಿ ಜಯಿಸಿದ ನಂತರ ಜನರು ನನ್ನ ಇತರ ಸಂಗೀತ ಸಂಯೋಜನೆಯ ಗೀತೆಗಳನ್ನು ಮತ್ತು ಇತರ ಭಾರತೀಯ ಸಂಗೀತ ಸಂಯೋಜಕರನ್ನು ಆಲಿಸಲು ಶುರು ಮಾಡಿದರು. ಕಲೆ ಮತ್ತು ಸಂಸ್ಕೃತಿ ಲೆಕ್ಕದಲ್ಲಿ ಭಾರತದ ಸಂಪೂರ್ಣ ವ್ಯಕ್ತಿ ಚಿತ್ರಣ ವೃದ್ಧಿಸಲಿದೆ.

ಪ್ರ: ಸಂಗೀತ ನಿರ್ದೇಶಕಿಯಾಗಿರುವ ನಿಮ್ಮ ಪುತ್ರಿ ಖದೀಜಾ ರೆಹಮಾನ್ ಸಂಯೋಜಿಸಿರುವ 'ಸಗವಾಸಿ' ಗೀತೆಗೆ ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳು ದೊರೆತಿದೆ ಮತ್ತು ನೀವಿದನ್ನು ಹೇಗೆ ನೋಡುತ್ತೀರಿ?

ಉ: ಒರ್ವ ತಂದೆಯಾಗಿ ನನಗೆ ಆಕೆಯ ಬಗ್ಗೆ ಯಾವಾಗಲೂ ಹೆಮ್ಮೆ ಇದೆ. ಆಕೆ ವಿಶಿಷ್ಟ ಪುತ್ರಿಯಾಗಿದ್ದು, ಆಕೆಗೆ ತನ್ನದೇ ಆದ ವ್ಯಕ್ತಿತ್ವವಿದೆ. ಸಾಮಾಜಿಕ ಮಾಧ್ಯಮದಲ್ಲಿ ಉದ್ಭವಿಸಿದ ಹಲವಾರು ಕಠಿಣ ಪರಿಸ್ಥಿತಿಯನ್ನು ಆಕೆ ಏಕಾಂಗಿಯಾಗಿಯೇ ಎದುರಿಸಿದಳು ಮತ್ತು ಆಕೆ ಈಗಲೂ ವಿನೀತಳಾಗಿದ್ದಾಳೆ. ಆಕೆ ಅದ್ಭುತ ಮನುಷ್ಯಳಾಗಿದ್ದು, ದೇವರು ಆಕೆಗೆ ಆಶೀರ್ವದಿಸಲಿ.

Similar News