ರಕ್ಷಣಾ ಸಚಿವಾಲಯ ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಬಾರದು: ಸುಪ್ರೀಂ ಕೋರ್ಟ್‌

Update: 2023-03-13 09:09 GMT

ಹೊಸದಿಲ್ಲಿ: ರಕ್ಷಣಾ ಸಚಿವಾಲಯ ಕಾನೂನನ್ನು ತನ್ನ ಕೈಗೆತ್ತಿಕೊಳ್ಳುವ ಪ್ರಯತ್ನ ನಡೆಸಬಾರದು ಎಂದು ಸುಪ್ರೀಂ ಕೋರ್ಟ್‌ (Supreme Court) ಇಂದು ಹೇಳಿದೆ.

ಒನ್‌ ರ್ಯಾಂಕ್‌ ಒನ್‌ ಪೆನ್ಶನ್‌ (ಒಆರ್‌ಒಪಿ) ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯಡಿ ಬಾಕಿಗಳನ್ನು ಪಾವತಿಸುವಲ್ಲಿ ಆಗಿರುವ ವಿಳಂಬದ ಕುರಿತಾದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸಂದರ್ಭ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮೇಲಿನಂತೆ ಹೇಳಿದರು.

ಬಾಕಿ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಹೇಳಿ ರಕ್ಷಣಾ ಸಚಿವಾಲಯವು ಜನವರಿ 20 ರಂದು ನೀಡಿದ ಮಾಹಿತಿಯನ್ನು ಉಲ್ಲೇಖಿಸಿ ಸಿಜೆಐ ಚಂದ್ರಚೂಡ್‌ ಮೇಲಿನಂತೆ ಹೇಳಿದರು.

ಮಾರ್ಚ್‌ 15 ರೊಳಗೆ ಬಾಕಿ ಮೊತ್ತ ಪಾವತಿಸುವಂತೆ ಸುಪ್ರೀಂ ಕೋರ್ಟ್‌ ಜನವರಿ 9 ರಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿರುವ ಹೊರತಾಗಿಯೂ ಸರ್ಕಾರ ನಾಲ್ಕು ಕಂತುಗಳಲ್ಲಿ ಪಾವತಿಸುವುದಾಗಿ ಹೇಳಿದೆ.

ಮಾರ್ಚ್‌ 15 ರೊಳಗೆ ಪಾವತಿಸಬೇಕೆಂಬ ಗಡುವು ಕೇಂದ್ರ ಸರ್ಕಾರಕ್ಕೆ ನೀಡಲಾಗಿದ್ದ ಎರಡನೇ ಹೆಚ್ಚುವರಿ ಸಮಯಾವಕಾಶವಾಗಿದೆ, ಕಳೆದ ಜೂನ್‌ ತಿಂಗಳಿನಲ್ಲಿ ಸರ್ಕಾರ ಸುಪ್ರೀಂ ಕೋರ್ಟ್‌ ಕದ ತಟ್ಟಿ ಪಾವತಿಗೆ ಇನ್ನೂ ಮೂರು ತಿಂಗಳ ವಿಸ್ತರಣೆ ಕೋರಿತ್ತು.

ಒನ್‌ ರ್ಯಾಂಕ್‌, ಒನ್‌ ಪೆನ್ಶನ್‌ ಯೋಜನೆಯಡಿ ಒಂದೇ ಶ್ರೇಣಿಯ ಎಲ್ಲಾ ನಿವೃತ್ತ ಮಿಲಿಟರಿ ಸಿಬ್ಬಂದಿಗೆ ಏಕರೂಪದಲ್ಲಿ ಪಿಂಚಣಿಯನ್ನು ಅವರ ನಿವೃತ್ತಿ ಸಮಯವನ್ನು ಪರಿಗಣಿಸದೆ ನೀಡಲಾಗುತ್ತದೆ.

ಕಂತುಗಳಲ್ಲಿ ಬಾಕಿ ಪಾವತಿಸುವ ಸಚಿವಾಲಯದ ನಿರ್ಧಾರಕ್ಕೆ ಫೆಬ್ರವರಿ 28 ರ ವಿಚಾರಣೆ ವೇಳೆಯೂ ಸುಪ್ರೀಂ ಕೋರ್ಟ್‌ ಆಕ್ಷೇಪಿಸಿತ್ತು. ಈ ಕುರಿತು "ಏಕಪಕ್ಷೀಯ ನಿರ್ಧಾರ"ಕ್ಕೆ ಕಾರಣ ವಿವರಿಸಿ ವೈಯಕ್ತಿಕ ಅಫಿಡವಿಟ್‌ ಸಲ್ಲಿಸುವಂತೆಯೂ ನ್ಯಾಯಾಲಯ ಸಚಿವಾಲಯದ ಕಾರ್ಯದರ್ಶಿಗೆ ಸೂಚಿಸಿತ್ತಲ್ಲದೆ ಮಾರ್ಚ್‌ 15 ರೊಳಗೆ ಬಾಕಿ ಪಾವತಿಸದೇ ಇದ್ದಲ್ಲಿ ಶೇ 9 ರಷ್ಟು ಬಡ್ಡಿ ವಿಧಿಸಲಾಗುವುದು ಎಂದು ತಿಳಿಸಿತ್ತು.

ಸಚಿವಾಲಯದ ಕಾರ್ಯದರ್ಶಿಯಿಂದ ಅಫಿಡವಿಟ್‌ ದೊರೆತ ನಂತರ ಕೇಂದ್ರದ ವಾದ ಆಲಿಸುವುದಾಗಿ ಇಂದಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ತಿಳಿಸಿದರು.

ಬಾಕಿಯನ್ನು ಹೇಗೆ ಪಾವತಿಸಲಾಗುವುದೆಂದು ಮುಂದಿನ ವಾರದೊಳಗೆ ತಿಳಿಸುವಂತೆ ನ್ಯಾಯಾಲಯ ಸೂಚಿಸಿದೆ.

"ನಮಗೆ ಸೋಮವಾರ ಮಾಹಿತಿ ನೀಡಿ. ಎಷ್ಟು ಉಳಿದಿದೆ, ಹೇಗೆ ಆದ್ಯತೆಗೊಳಿಸಲಾಗುವುದು. ಅತ್ಯಂತ ಹಿರಿಯರು, ವಿಧವೆಯರು ಮತ್ತಿರರಿಗೆ  ಆದ್ಯತೆ ನೀಡಬಹುದು, ಉದಾ 75 ಮೇಲ್ಪಟ್ಟವರಿಗೆ," ಎಂದು ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಮತ್ತು ಜೆ ಬಿ ಪರ್ಡಿವಾಲ ಅವರ ಪೀಠ ಹೇಳಿತು.

ಇದನ್ನೂ ಓದಿ: ಮುಂಬೈ: ಮುಸ್ಲಿಮರ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದ ಹಿಂದುತ್ವ ರ‍್ಯಾಲಿ

Similar News