'ನಾಟು ನಾಟು' ಪರಿಚಯ ನೃತ್ಯ ಪ್ರದರ್ಶಿಸಿದ ದೀಪಿಕಾ: ಆಸ್ಕರ್ ಸಮಾರಂಭದ ಸಭಿಕರಿಂದ ಎದ್ದು ನಿಂತು ಮೆಚ್ಚುಗೆ

Update: 2023-03-13 09:32 GMT

ಲಾಸ್ ಏಂಜಲೀಸ್: 95ನೇ ಆಸ್ಕರ್ ಪ್ರಶಸ್ತಿಯ ಮೂಲ ಗೀತೆ ವಿಭಾಗದಲ್ಲಿ ರಾಜಮೌಳಿ ನಿರ್ದೇಶನ, ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯ 'RRR' ಚಿತ್ರದ 'ನಾಟು ನಾಟು' ಗೀತೆ ಪ್ರಶಸ್ತಿಗೆ ಭಾಜನವಾಗಿದ್ದು, ಆ ಗೀತೆಗೆ ಗಾಯಕ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ಅಮೋಘ ನೃತ್ಯ ಪ್ರದರ್ಶನ ನೀಡಿದರು. ಈ ನೃತ್ಯ ಪ್ರದರ್ಶನಕ್ಕೆ ಸಭಿಕರು ಎದ್ದು ನಿಂತು ಅಭಿನಂದನೆ ಸಲ್ಲಿಸಿದರು. ಅದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೆರಗು ನೀಡುವಂತಿತ್ತು. ವಿಶೇಷವೆಂದರೆ, ಈ ನೃತ್ಯ ಪ್ರದರ್ಶನ ತಂಡವನ್ನು ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಸಭಿಕರಿಗೆ ಪರಿಚಯಿಸಿದರು.

ನೃತ್ಯ ತಂಡವನ್ನು ಪರಿಚಯಿಸಿದ ನಂತರ ಮಾತನಾಡಿದ ದೀಪಿಕಾ ಪಡುಕೋಣೆ, "ತಡೆದುಕೊಳ್ಳಲು ಸಾಧ್ಯವಾಗದಂತಹ ಸಮೂಹ ಗಾಯನ, ಮೈನವಿರೇಳಿಸುವ ಸಂಗೀತ ವಾದನ ಹಾಗೂ ಅದಕ್ಕೆ ಹೊಂದುವಂತಹ ನೃತ್ಯದ ಹೆಜ್ಜೆಗಳು ಈ ಗೀತೆಯನ್ನು ಜಾಗತಿಕ ರೋಮಾಂಚನವಾಗಿಸಿವೆ. ಈ ಗೀತೆ 'RRR' ಸಿನಿಮಾದ ಪ್ರಮುಖ ಘಟ್ಟದಲ್ಲಿ ಬರುತ್ತದೆ. ಈ ಚಿತ್ರವು ನೈಜ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ಮತ್ತು ಕೋಮರನ್ ಭೀಮ ನಡುವಿನ ಗೆಳೆತನದ ಕುರಿತದ್ದಾಗಿದೆ. ಇದರೊಂದಿಗೆ ತೆಲುಗಿನ ಗಾಯನ ಹಾಗೂ ವಸಾಹತುಶಾಹಿವಿರೋಧಿ ನೆಲೆಯ ಸಿನಿಮಾದ ನಿರೂಪಣೆ ಸೇರಿ ಒಟ್ಟಾರೆ ಸ್ಫೋಟಕವಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಈ ಗೀತೆಯು ಯೂಟ್ಯೂಬ್ ಹಾಗೂ ಟಿಕ್ ಟಾಕ್‌ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ಜಗತ್ತಿನಾದ್ಯಂತ ಇರುವ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಈ ಗೀತೆಗೆ ನೃತ್ಯ ಮಾಡುತ್ತಿದ್ದಾರೆ. ಇದಲ್ಲದೆ, ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಪ್ರಥಮ ಭಾರತೀಯ ನಿರ್ಮಾಣದ ಚಿತ್ರ ಇದಾಗಿದೆ. ನಿಮಗೆ ನಾಟು ಗೊತ್ತಿದೆಯಾ? ಯಾಕೆಂದರೆ, ನಿಮಗೆ ಗೊತ್ತಿಲ್ಲದಿದ್ದರೆ, ನೀವು ಅದಾಗುವುದರಲ್ಲಿದ್ದೀರಿ. RRR ಸಿನಿಮಾದಿಂದ ಇದೇ ನಾಟು ನಾಟು" ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ಆಸ್ಕರ್‌ 2023: 'Everything Everywhere All at Once' ಚಿತ್ರಕ್ಕೆ ಏಳು ವಿಭಾಗಗಳಲ್ಲಿ ಪ್ರಶಸ್ತಿ

Similar News