ಅಸ್ಸಾಂ: ಪೌರತ್ವ ಸಾಬೀತುಪಡಿಸಲಾಗದವರನ್ನು ರಾಜ್ಯದ ಅತ್ಯಂತ ದೊಡ್ಡ ಬಂಧನ ಕೇಂದ್ರಕ್ಕೆ ರವಾನೆ

Update: 2023-03-13 17:22 GMT

ಗುವಾಹಟಿ, ಮಾ.13: ಅಸ್ಸಾಮಿನಲ್ಲಿ ಎನ್ಆರ್ಸಿಯಡಿ ‘ಘೋಷಿತ ವಿದೇಶಿಯರು ’ಎಂದು ಗುರುತಿಸಲಾಗಿರುವ ಎಲ್ಲ ವ್ಯಕ್ತಿಗಳನ್ನು ರಾಜ್ಯದಲ್ಲಿಯ ಅತ್ಯಂತ ದೊಡ್ಡ ಬಂಧನ ಕೇಂದ್ರವಾಗಿರುವ ಗೋಪಾಲಪುರ ಜಿಲ್ಲೆಯ ಮಟಿಯಾ ಟ್ರಾನ್ಸಿಟ್ ಕ್ಯಾಂಪ್ಗೆ ಸ್ಥಳಾಂತರಿಸಲಾಗಿದೆ.

ವಿದೇಶಿಯರೆಂದು ಗುರುತಿಸಲ್ಪಟ್ಟಿರುವ ಮತ್ತು ಗಡಿಪಾರಿಗೆ ಕಾಯುತ್ತಿರುವ ಅಥವಾ ತಮ್ಮ ಪೌರತ್ವ ಹಕ್ಕುಗಳ ಇತ್ಯರ್ಥಕ್ಕೆ ಕಾಯುತ್ತಿರುವ ಜನರನ್ನು ಇರಿಸಲು ಮಟಿಯಾ ಟ್ರಾನ್ಸಿಟ್ ಕ್ಯಾಂಪ್ನ್ನು ಬಳಸಲಾಗುತ್ತಿದೆ. ಈ ಪೈಕಿ ಹೆಚ್ಚಿನವರು ತಾವು ಭಾರತೀಯ ಪ್ರಜೆಗಳೆಂದು ಹೇಳಿಕೊಳ್ಳುತ್ತಿದ್ದಾರೆ. ಅಸ್ಸಾಮಿನ ವಿದೇಶಿಯರ ಬಂಧನ ಕಾರ್ಯವಿಧಾನಗಳು ತಮ್ಮನ್ನು ಶಂಕಿತರೆಂದು ಭಾವಿಸಿರುವುದರಿಂದ ಅಥವಾ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಕಷ್ಟು ದಾಖಲೆಗಳನ್ನು ಒದಗಿಸಲು ಸಾಧ್ಯವಾಗದ್ದಕ್ಕೆ  ತಮ್ಮನ್ನು ಇಲ್ಲಿ ಕೂಡಿ ಹಾಕಲಾಗಿದೆ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.

ರಾಜ್ಯ ಸರಕಾರದ ಅಧಿಸೂಚನೆಯಂತೆ ಬಂಧನ ಕೇಂದ್ರಗಳನ್ನು ಈಗ ಟ್ರಾನ್ಸಿಟ್ ಕ್ಯಾಂಪ್ ಹೆಸರಿನಲ್ಲಿ ಕರೆಯಲಾಗುತ್ತಿದೆ.
87 ಬಂಧಿತರ ಇತ್ತೀಚಿನ ತಂಡವನ್ನು ಸಿಲ್ಚಾರ್ ಬಂಧನ ಕೇಂದ್ರದಿಂದ ಮಟಿಯಾ ಟ್ರಾನ್ಸಿಟ್ ಕ್ಯಾಂಪ್ಗೆ ಸ್ಥಳಾಂತರಿಸಲಾಗಿದೆ. ಎಲ್ಲ ವರ್ಗಾವಣೆ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅಸ್ಸಾಮಿನಲ್ಲಿಯ ಆರು ಬಂಧನ ಕೇಂದ್ರಗಳು ಅಸ್ತಿತ್ವವನ್ನು ಕಳೆದುಕೊಳ್ಳಲಿವೆ ಎಂದು ರಾಜ್ಯದ ಬಂದಿಖಾನೆಗಳ ಐಜಿ ಪುಬಾಲಿ ಗೋಹೈನ್ ಸುದ್ದಿಸಂಸ್ಥೆಗೆ ತಿಳಿಸಿದರು.

ಈ ಆರು ಬಂಧನ ಕೇಂದ್ರಗಳಿಂದ ಸ್ಥಳಾಂತರ ಪ್ರಕ್ರಿಯೆ ಜ.27ರಂದು ಆರಂಭಗೊಂಡಿತ್ತು. ಪ್ರಸಕ್ತ ಮಟಿಯಾ ಕ್ಯಾಂಪ್ನಲ್ಲಿ 217 ಘೋಷಿತ ವಿದೇಶಿಯರಿದ್ದಾರೆ. ನ್ಯಾಯಾಲಯದ ತೀರ್ಪುಗಳು ಮತ್ತು ಗಡಿಪಾರಿನೊಂದಿಗೆ ಈ ಸಂಖ್ಯೆ ಆಗಾಗ್ಗೆ ಬದಲಾಗುತ್ತಿರುತ್ತದೆ. ಮೂರು ದಿನಗಳ ಹಿಂದೆ ಮೂವರು ಬಾಂಗ್ಲಾದೇಶಿಗಳನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ  ಎಂದು ಗೋಪಾಲಪುರ ಜಿಲ್ಲಾಧಿಕಾರಿ ಖನೀಂದ್ರ ಚೌಧುರಿ ತಿಳಿಸಿದರು.

Similar News