ಡಬ್ಲ್ಯೂಪಿಎಲ್‌: ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ, ಸತತ 5ನೇ ಸೋಲು ಕಂಡ ಆರ್‌ಸಿಬಿ

Update: 2023-03-13 17:36 GMT

    ನವಿ ಮುಂಬೈ, ಮಾ.13: ಶಿಖಾ ಪಾಂಡೆ (3-23) ಅತ್ಯುತ್ತಮ ಬೌಲಿಂಗ್, ಅಲಿಸ್ ಕಾಪ್ಸೆ (38 ರನ್) ಹಾಗೂ ಮರಿಝಾನ್ ಕಾಪ್(ಔಟಾಗದೆ 32 ರನ್) ಅವರ ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಹಿಳಾ ಪ್ರೀಮಿಯರ್ ಲೀಗ್‌ನ(ಡಬ್ಲುಪಿಎಲ್)11ನೇ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದಿಂದ ಮಣಿಸಿದೆ.

ಆರ್‌ಸಿಬಿ ಟೂರ್ನಿಯಲ್ಲಿ ಸತತ 5ನೇ ಸೋಲು ಕಾಣುವ ಮೂಲಕ ಕಳಪೆ ಪ್ರದರ್ಶನ ಮುಂದುವರಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 151 ರನ್ ಗುರಿ ಬೆನ್ನಟ್ಟಿದ ಡೆಲ್ಲಿ 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಜೆಮಿಮಾ ರೋಡ್ರಿಗಸ್ 32 ರನ್ ಹಾಗೂ ಜೆಸ್ ಜೊನಾಸ್ಸನ್ ಔಟಾಗದೆ 29 ರನ್ ಕಾಣಿಕೆ ನೀಡಿದರು. ಡೆಲ್ಲಿ 5 ಪಂದ್ಯಗಳಲ್ಲಿ 4ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ತಂಡ ಎಲ್ಲಿಸ್ ಪೆರ್ರಿ (ಔಟಾಗದೆ 67 ರನ್, 52 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 150 ರನ್ ಗಳಿಸಿದೆ. ಪೆರ್ರಿ ಸರ್ವಾಧಿಕ ಸ್ಕೋರ್ ಗಳಿಸಿದರೆ, ವಿಕೆಟ್‌ಕೀಪರ್ ರಿಚಾ ಘೋಷ್ 37 ರನ್(16 ಎಸೆತ) ಹಾಗೂ ಸೋಫಿ ಡಿವೈನ್ 21 ರನ್(19 ಎಸೆತ)ಗಳಿಸಿದರು.

ಡೆಲ್ಲಿ ಪರ ಶಿಖಾ ಪಾಂಡೆ(3-23) ಯಶಸ್ವಿ ಬೌಲರ್ ಎನಿಸಿಕೊಂಡರು.
 

Similar News