ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೋರಿ ಸಲ್ಲಿಸಿರುವ ಕೇಂದ್ರದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಕೇಂದ್ರ ಸರಕಾರಕ್ಕೆ ತೀವ್ರ ಹಿನ್ನಡೆ

Update: 2023-03-14 06:16 GMT

ಹೊಸದಿಲ್ಲಿ: 1984 ರ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ  ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್‌ ನಿಂದ ಹೆಚ್ಚಿನ ಪರಿಹಾರ ಕೋರಿ ಸಲ್ಲಿಸಿರುವ ಕೇಂದ್ರ ಸರಕಾರದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ  ವಜಾಗೊಳಿಸಿದೆ.

3,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ 1984 ರ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಹಾಗೂ ಪರಿಸರ ಹಾನಿಯ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್‌ನ( ಯುಸಿಸಿ)ಉತ್ತರಾಧಿಕಾರಿ ಸಂಸ್ಥೆಗಳಿಂದ ಹೆಚ್ಚುವರಿ ಹಣವನ್ನು ಕೋರಿ ಕೇಂದ್ರ  ಕ್ಯುರೇಟಿವ್ ಮನವಿಯನ್ನು ಸಲ್ಲಿಸಿತ್ತು.  ನ್ಯಾಯಾಲಯದ ಈ ತೀರ್ಪಿನಿಂದಾಗಿ ಕೇಂದ್ರ ಸರಕಾರಕ್ಕೆ ತೀವ್ರ ಹಿನ್ನಡೆ ಆಗಿದೆ.

ಪ್ರಕರಣವನ್ನು ಪುನಃ ತೆರೆಯಬೇಕು. ಸಂತ್ರಸ್ತರಿಗೆ 7,844 ಕೋಟಿ ರೂ. ಮೌಲ್ಯದ ಹೆಚ್ಚುವರಿ ಪರಿಹಾರವನ್ನು ನೀಡುವಂತೆ ಯೂನಿಯನ್ ಕಾರ್ಬೈಡ್‌ ಕಾರ್ಪೊರೇಶನ್‌ ಗೆ ನಿರ್ದೇಶಿಸಬೇಕು ಎಂದು ಕೇಂದ್ರ ಸರಕಾರವು ಕೋರಿತ್ತು.ಆದಾಗ್ಯೂ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಅರ್ಜಿಯನ್ನು ವಜಾಗೊಳಿಸಿತು.

ಎರಡು ದಶಕಗಳ ನಂತರ ಈ ವಿಷಯವನ್ನು ಪ್ರಸ್ತಾಪಿಸಲು  ಕಾರಣ  ಏನೆಂದು  ಕೇಂದ್ರವು ಹೇಳಿಲ್ಲ ಎಂದಿರುವ ನ್ಯಾಯಾಲಯ ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಇರುವ 50 ಕೋಟಿ ರೂ. ಮೊತ್ತವನ್ನು ಬಾಕಿ ಇರುವ ಪರಿಹಾರದ ಕ್ಲೈಮ್‌ಗಳನ್ನು ಕ್ಲಿಯರ್ ಮಾಡಲು ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಹಾಗೂ  ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಅಭಯ್ ಎಸ್.  ಓಕಾ, ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ  ನ್ಯಾಯಮೂರ್ತಿ ಜೆ ಕೆ ಮಹೇಶ್ವರ್ ಅವರನ್ನೊಳಗೊಂಡ ಸಂವಿಧಾನ ಪೀಠವು ಕ್ಯುರೇಟಿವ್ ಅರ್ಜಿಯ ತೀರ್ಪನ್ನು ಜನವರಿ 12 ರಂದು ಕಾಯ್ದಿರಿಸಿತ್ತು.

Similar News