ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ: ಟಿಟಿಇ ಬಂಧನ

Update: 2023-03-14 16:48 GMT

ಕೋಲ್ಕತಾ,ಮಾ.೧೪: ಕೋಲ್ಕತಾ-ಅಮೃತಸರ ಅಕಾಲ್ ತಖ್ತ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದಕ್ಕಾಗಿ ರೈಲು ಟಿಕೆಟ್ ಪರೀಕ್ಷಕ (ಟಿಟಿಇ)ನೋರ್ವನನ್ನು ಮಂಗಳವಾರ ಬಂಧಿಸಲಾಗಿದ್ದು,ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಆರೋಪಿ ಮುನ್ನಾ ಕುಮಾರನನ್ನು ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಟಿಟಿಇ ಆಗಿ ನಿಯೋಜಿಸಲಾಗಿತ್ತು. ಸೋಮವಾರ ರಾತ್ರಿ ಮಹಿಳೆಯ ತಲೆಯ ಮೇಲೆ ಮೂತ್ರ ವಿಸರ್ಜಿಸಿದ ಘಟನೆ ನಡೆದಾಗ ಕುಮಾರ ಕರ್ತವ್ಯದಲ್ಲಿರಲಿಲ್ಲ.

ಮಹಿಳೆ ಮತ್ತು ಆಕೆಯ ಪತಿ ಬಿಹಾರದ ಕಿಯುಲ್‌ನಿಂದ ಪಂಜಾಬಿನ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದರು. ಪತಿಯು ದಾಖಲಿಸಿದ ದೂರಿನ ಮೇರೆಗೆ ಕುಮಾರನನ್ನು ಲಕ್ನೋದ ಚಾರ್‌ಬಾಗ್ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಇನ್‌ಸ್ಪೆಕ್ಟರ್ ನವರತ್ನ ಗೌತಮ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಘಟನೆ ನಡೆದಾಗ ಕುಮಾರ ಮದ್ಯದ ಅಮಲಿನಲ್ಲಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ,ಅದರೆ ಪೊಲೀಸರಿನ್ನೂ ಇದನ್ನು ಖಚಿತಪಡಿಸಿಕೊಳ್ಳಬೇಕಿದೆ.

ಕುಮಾರನನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ ಅವರು,ಇಂತಹ ವರ್ತನೆಯನ್ನು ಎಳ್ಳಷ್ಟೂ ಸಹಿಸುವುದಿಲ್ಲ ಎಂದರು.

‘ಮಹಿಳೆಯರಿಗೆ ಅಗೌರವವನ್ನು ತೋರಿಸುವುದು ಗಂಭೀರ ದುರ್ವರ್ತನೆಯಾಗಿದೆ. ಹಾಗೆ ಮಾಡುವ ಮೂಲಕ ನೀವು ನಿಮಗೆ ಮಾತ್ರವಲ್ಲ,ಒಂದು ಸಂಸ್ಥೆಯಾಗಿ ಇಡೀ ರೈಲ್ವೆಗೆ ಅಗೌರವವನ್ನುಂಟು ಮಾಡಿದ್ದೀರಿ ’ಎಂದು ಉತ್ತರ ರೈಲ್ವೆಯು ಕುಮಾರ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಪೊಲೀಸರು ಐಪಿಸಿಯ ವಿವಿಧ ಕಲಮ್‌ಗಳಡಿ ಕುಮಾರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Similar News