ಅದಾನಿ ವಿವಾದ: ಇಡಿ & ಸಿಬಿಐ ಕಚೇರಿಗಳಿಗೆ ಪಾದಯಾತ್ರೆಗೆ ವಿಪಕ್ಷ ನಿರ್ಧಾರ

Update: 2023-03-15 02:40 GMT

ಹೊಸದಿಲ್ಲಿ: ಅದಾನಿ ವಿವಾದದ ಬಗ್ಗೆ ವಿಸ್ತೃತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮೋದಿ ಸರ್ಕಾರದ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ, ಕಾನೂನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಕಚೇರಿಗೆ ಪಾದಯಾತ್ರೆ ಕೈಗೊಳ್ಳಲು ವಿರೋಧ ಪಕ್ಷಗಳು ಮುಂದಾಗಿವೆ.

ಸಂಸತ್ತಿನಲ್ಲಿ ಒಗ್ಗಟ್ಟಾಗಿರುವ ಹದಿನಾರು ಪಕ್ಷಗಳ ಸಂಸದರು ಬುಧವಾರ ಸಂಸದೀಯ ಕಲಾಪ ಆರಂಭಕ್ಕೆ ಮುನ್ನ ಕಾನೂನು ಜಾರಿ ನಿರ್ದೇಶನಾಲಯ ಕಚೇರಿಗೆ ಪಾದಯಾತ್ರೆಯಲ್ಲಿ ತೆರಳುವ ಸಾಧ್ಯತೆ ಇದೆ. ಒಂದು ದಿನ ಬಳಿಕ ಸಿಬಿಐ ಕಚೇರಿಗೂ ಪಾದಯಾತ್ರೆ ತೆರಳಲು ಉದ್ದೇಶಿಸಲಾಗಿದೆ.

ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು ಗುರಿ ಮಾಡಿ ಆಡಳಿತಾರೂಢ ಬಿಜೆಪಿ ತನಿಖಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಸಂಬಂಧ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು, ಹಿಂಡೆನ್‌ಬರ್ಗ್ ವರದಿ ಪ್ರಕಟಣಣೆ ಬಳಿಕ ಭುಗಿಲೆದ್ದ ಅದಾನಿ ವಿವಾದದ ಬಗ್ಗೆಯೂ ತಕ್ಷಣ ತನಿಖೆ ನಡೆಸಬೇಕು ಎಂದು ಒತ್ತಡ ತರಲಿವೆ.

ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಈ ಪ್ರಸ್ತಾವ ಮುಂದಿಟ್ಟಿದ್ದಾರೆ. ಈ ಬಗ್ಗೆ ಯಾವ ಪಕ್ಷವೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಕಾಂಗ್ರೆಸ್ಸೇತರ ವಿರೋಧ ಪಕ್ಷಗಳ ಸದಸ್ಯರು ಉಭಯ ಏಜೆನ್ಸಿಗಳ ಮುಖ್ಯಸ್ಥರಿಗೆ ನೀಡುವ ಮನವಿಪತ್ರದ ಬಗ್ಗೆ ಸ್ಪಷ್ಟನೆ ಕೇಳಿದರು. ಮನವಿಪತ್ರದ ಪ್ರತಿಯನ್ನು ಮುಂಚಿತವಾಗಿಯೇ ಒದಗಿಸಿ, ಪಕ್ಷಗಳ ಅನುಮೋದನೆ ಪಡೆಯಲು ಅನುವು ಮಾಡಿಕೊಡಬೇಕು ಎಂದು ಸಲಹೆ ಮಾಡಿದರು.

Similar News