ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ: ಉಚ್ಛಾಟಿತ ಬಿಜೆಪಿ ಶಾಸಕ ರಾಜಾ ಸಿಂಗ್‌ ವಿರುದ್ಧ ಪ್ರಕರಣ ದಾಖಲು

Update: 2023-03-15 07:06 GMT

ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪದ ಮೇಲೆ ಉಚ್ಛಾಟಿತ ಬಿಜೆಪಿ (BJP) ಶಾಸಕ ಟಿ ರಾಜಾ ಸಿಂಗ್‌ (T Raja Singh) ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಕೆಲ ಸ್ಥಳೀಯರು ನೀಡಿದ ದೂರಿನ ಆಧಾರದಲ್ಲಿ ಶಾಸಕನ ವಿರುದ್ಧ ಅಹ್ಮದ್‌ನಗರ್‌ ಜಿಲ್ಲೆಯ ಶ್ರೀರಾಂಪುರ್‌ ನಗರದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್‌ 10 ರಂದು ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ನಿಂದನಾತ್ಮಕ ಮಾತುಗಳನ್ನು ಆಡಿದ್ದೇ ಅಲ್ಲದೆ 2026 ರಲ್ಲಿ ಭಾರತವನ್ನು ಹಿಂದು ರಾಷ್ಟ್ರ ಎಂದು ಘೋಷಿಸಲಾಗುವುದು ಎಂದು ಹೇಳಿದ್ದರು. ಅವರ ಈ ಭಾಷಣದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

"ಹಿಂದುಗಳ ವಿರುದ್ಧ ಮಾತನಾಡುವ ಯಾರನ್ನೇ ಆದರೂ ನಾವು ಬಿಟ್ಟುಬಿಡುವುದಿಲ್ಲ. ನಮ್ಮ ಹಿಂದು ರಾಷ್ಟ್ರದಲ್ಲಿ ನೀವು ಈಗ ದಿನದಲ್ಲಿ ಐದು ಬಾರಿ ಮಾಡುವುದನ್ನು ಮಾಡಲು ನಿಮಗೆ ಧ್ವನಿವರ್ಧಕಗಳು ಸಹ ದೊರೆಯುವುದಿಲ್ಲ," ಎಂದು ಅವರು ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಶಿವಸೇನೆಯ ಸ್ಥಾಪಕ ದಿವಂಗತ ಬಾಳ್‌ ಠಾಕ್ರೆ ಅವರು ಮುಸ್ಲಿಮರನ್ನು ʻಕೀಟಗಳುʼ ಮತ್ತು ʻಜಿರಳೆಗಳುʼ ಎಂದಿದ್ದರು ಹಾಗೂ "ಅವರನ್ನು ಸ್ಪ್ರೇ ಬಳಸಿ ನಿವಾರಿಸುವ" ಬಗ್ಗೆ ಮಾತನಾಡಿದ್ದರೆಂದು ಸಿಂಗ್‌ ಹೇಳಿಕೊಂಡಿದ್ದಾರೆ.

ಮುಸ್ಲಿಮರಿಗೆ ಥಳಿಸಬೇಕಿದ್ದರೆ, ಬಜರಂಗದಳ ಸೇರಿ ಎಂದು ಹೈದರಾಬಾದ್‌ನ ಗೋಶಮಹಲ್‌ ಕ್ಷೇತ್ರದ ಶಾಸಕರಾಗಿರುವ ಸಿಂಗ್‌ ಅವರು ಸಾರ್ವಜನಿಕರಿಗೆ ಕರೆ ನೀಡಿದರು.

"ಹಿಂದುಗಳ ವಿರುದ್ಧ ಮಾತನಾಡುವವರು ಹಾಗೂ ಗೋವುಗಳ ವಧೆ ನಡೆಸುವವರಿಗೆ ನಾವು ಸಿದ್ಧರಿದ್ದೇವೆ ಎಂದು ತಿಳಿಯಲಿ," ಎಂದು ಅವರು ಹೇಳಿದರು.

ಹೈದರಾಬಾದ್‌ನಲ್ಲಿ ಪ್ರವಾದಿ ಮೊಹಮ್ಮದ್‌ ಕುರಿತು ನಿಂದನಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕಳೆದ ವರ್ಷ ಬಿಜೆಪಿ ಸಿಂಗ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಿತ್ತು.

ಇದನ್ನೂ ಓದಿ: ಇಟ್ಟಿಗೆ ಭಟ್ಟಿಯಲ್ಲಿ ಮಲಗಿದ್ದ ಐವರು ಕಾರ್ಮಿಕರು ಉಸಿರುಗಟ್ಟಿ ಸಾವು

Similar News