ಬಾಲಿವುಡ್ ನ ಹಿರಿಯ ನಟ ಸಮೀರ್ ಖಾಖರ್ ನಿಧನ

Update: 2023-03-15 07:08 GMT

 ಮುಂಬೈ:  ಟಿವಿ ಶೋ ನುಕ್ಕಡ್‌ನಲ್ಲಿ ಖೋಪ್ರಿ ಪಾತ್ರದಲ್ಲಿ ಹೆಚ್ಚು ಹೆಸರುವಾಸಿಯಾಗಿರುವ  ಹಿರಿಯ ನಟ ಸಮೀರ್ ಖಾಖರ್(Veteran actor Sameer Khakhar) ಅವರು ಇಂದು (ಮಾರ್ಚ್ 15) ನಿಧನರಾದರು. ನಟನಿಗೆ 71 ವರ್ಷ ವಯಸ್ಸಾಗಿತ್ತು.

 ಅವರು ತಮ್ಮ 38 ವರ್ಷಗಳ ನಟನಾ ವೃತ್ತಿಜೀವನದಲ್ಲಿ ವಿವಿಧ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದರು. ಸಮೀರ್ ಅವರು  ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಯುಎಸ್‌ಎಯಲ್ಲಿ ನೆಲೆಸಿದ್ದರು. ನಂತರ, ಅವರು ಹಿಂತಿರುಗಿದರು. ಎರಡು ಗುಜರಾತಿ ನಾಟಕಗಳನ್ನು ಮಾಡಿದ್ದರು. ಸಲ್ಮಾನ್ ಖಾನ್ ಅವರ 'ಜೈ ಹೋ' ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ಜನಪ್ರಿಯರಾಗಿದ್ದರು.

ಬಹು ಅಂಗಾಂಗ ವೈಫಲ್ಯದಿಂದ ಸಮೀರ್ ನಿಧನರಾದರು ಎಂದು ಸಮೀರ್ ಅವರ ಸೋದರಸಂಬಂಧಿ ಗಣೇಶ್ ಖಾಖರ್ ಅವರು ಬಹಿರಂಗಪಡಿಸಿದರು.  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸಮೀರ್ ಅವರನ್ನು ಬೊರಿವಲಿಯ ಎಂಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಬೆಳಗ್ಗಿನ ಜಾವ 4:30ಕ್ಕೆ ಕೊನೆಯುಸಿರೆಳೆದಿದ್ದಾರೆ.

ಸಮೀರ್ ಅವರ ಅಂತ್ಯಕ್ರಿಯೆಯು ಇಂದು ಬೆಳಿಗ್ಗೆ 10:30 ಕ್ಕೆ ಬೊರಿವಲಿಯ ಬಾಭಾಯಿ ನಾಕಾ ಸ್ಮಶಾನದಲ್ಲಿ ನಡೆದಿದ್ದು, ಸಮೀರ್ ಟಿವಿ ಹಾಗೂ  ಚಲನಚಿತ್ರ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು.

Similar News