7 ವಿಭಾಗಗಳಲ್ಲಿ ಆಸ್ಕರ್‌ ಪ್ರಶಸ್ತಿ ಗೆದ್ದ ಚಿತ್ರ ತಂಡದಲ್ಲಿದ್ದ ಭಾರತೀಯನ ಬಗ್ಗೆ ಇಲ್ಲಿದೆ ಮಾಹಿತಿ...

Update: 2023-03-15 14:02 GMT

ಮುಂಬೈ: ʼನಾಟು ನಾಟುʼ (Naatu Naatu) ಹಾಡಿಗೆ ಹಾಗೂ ʼದಿ ಎಲಿಫೆಂಟ್‌ ವಿಸ್ಪರರ್ಸ್‌ʼಗೆ (The Elephant Whisperers) ಆಸ್ಕರ್‌ (Oscars) ಪ್ರಶಸ್ತಿ ದೊರೆತ ಖುಷಿಯ ನಡುವೆ ಇನ್ನೊಂದು ಸಂತಸದ ವಿಚಾರ ಭಾರತಕ್ಕಿದೆ.

ಏಳು ಆಸ್ಕರ್‌ ಪ್ರಶಸ್ತಿಗೆ ಪಾತ್ರವಾಗಿರುವ ಚಿತ್ರ "ಎವ್ರಿತಿಂಗ್‌, ಎವ್ರಿವೇರ್‌ ಆಲ್‌ ಎಟ್‌ ಒನ್ಸ್‌ʼ (Everything Everywhere All At Once) ಇದರ ಸಹಾಯಕ ಸಂಕಲನಕಾರನಾಗಿ ಕೆಲಸ ಮಾಡಿದವರು ಮುಂಬೈನ ಬಾಂದ್ರಾ ನಿವಾಸಿಯಾಗಿರುವ 30 ವರ್ಷದ ಆಶಿಷ್‌ ಡಿʼಮೆಲ್ಲೋ ಎಂಬುದು ಕೂಡ ಭಾರತೀಯರಿಗೆ ಹೆಮ್ಮೆಯ ಸಂಗತಿ. ಈ ಚಿತ್ರ ಎಡಿಟಿಂಗ್‌ಗಾಗಿಯೂ ಪ್ರಶಸ್ತಿ ಪಡೆದಿದೆ.

ಚಿತ್ರದ ಮುಖ್ಯ ಸಂಪಾದಕ ಪೌಲ್‌ ರೋಜರ್ಸ್‌ ಅವರಡಿ ಕೆಲಸ ಮಾಡಿರುವ ಆಶಿಷ್‌ ಅವರೊಂದಿಗೆ ಝೆಕುನ್‌ ಮಾವೋ ಎಂಬವರೂ ಸಹಾಯಕ ಸಂಕಲನಕಾರನಾಗಿದ್ದರು. ಆಶಿಷ್‌ ಅವರ ತಂದೆ ಡೆನ್ಝಿಲ್‌ ಡಿʼಮೆಲ್ಲೋ ಅವರು ಬಾಂಬೆ ಹೈಕೋರ್ಟ್‌ ವಕೀಲರಾಗಿದ್ಧಾರೆ. ಅವರ ತಾಯಿಯ ಹೆಸರು ರುತ್.‌ ಅವರ ಕುಟುಂಬ ಬಾಂದ್ರಾದ ಮೆಹಬೂಬ್‌ ಸ್ಟುಡಿಯೋ ಸಮೀಪ ವಾಸಿಸುತ್ತಿದೆ.

ಮುಂಬೈಯಲ್ಲಿ ಹುಟ್ಟಿ ಬೆಳೆದ ತಮಗೆ ಚಿತ್ರರಂಗದ ಮೇಲಿನ ಆಕರ್ಷಣೆ ಹೆಚ್ಚಾಗಿತ್ತು ಎಂದು ಅವರು ಹೇಳುತ್ತಾರೆ.

ಸೈಂಟ್ ಕ್ಸೇವಿಯರ್ಸ್‌ ಕಾಲೇಜಿನಿಂದ ಸಮೂಹ ಮಾಧ್ಯಮದಲ್ಲಿ ಪದವಿ ಪಡೆದಿರುವ ಆಶಿಷ್‌, ಅವರು ಲಾಸ್‌ ಏಂಜಲಿಸ್‌ಗೆ ತೆರಳುವುದಕ್ಕಿಂತ ಮುಂಚೆ ಸ್ವಲ್ಪ ಕಾಲ ಖ್ಯಾತ ನಿರ್ಮಾಣ ಸಂಶ್ಥೆಯಲ್ಲಿ ಕೆಲಸ ಮಾಡಿದ್ದರು. ಹಲವಾರು ಜಾಹೀರಾತುಗಳಲ್ಲಿಯೂ ಅವರ ಕೈಚಳಕವಿದ್ದು ಚಲನಚಿತ್ರ ʻಮರ್ದಾನಿʼಗಾಗಿಯೂ ಅವರು ದುಡಿದಿದ್ದರು.

ಲಾಸ್‌ ಏಂಜಲಿಸ್‌ನಲ್ಲಿ 2015 ರಲ್ಲಿ ಅವರು ಅಮೆರಿಕನ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನ ಎಡಿಟಿಂಗ್‌ ಪ್ರೋಗ್ರಾಂಗೆ ಸೇರಿದ್ದರು. 2017 ರಲ್ಲಿ ಪದವಿ ಪಡೆದ ಅವರು ಅಲ್ಲಿ ಹಲವಾರು ಕಿರುಚಿತ್ರಗಳಿಗಾಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ: ಆಸ್ಕರ್‌ 2023: 'Everything Everywhere All at Once' ಚಿತ್ರಕ್ಕೆ ಏಳು ವಿಭಾಗಗಳಲ್ಲಿ ಪ್ರಶಸ್ತಿ

Similar News