ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆ

Update: 2023-03-15 13:59 GMT

ಬೈಂದೂರು: ಕಂದಾಯ ಇಲಾಖೆ, ಉಡುಪಿ ಜಿಲ್ಲಾಡಳಿತದ ವತಿ ಯಿಂದ ಬೈಂದೂರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬೈಂದೂರು ತಾಲೂಕು ನೂತನ ಆಡಳಿತ ಸೌಧ ಕಟ್ಟಡವನ್ನು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ಬುಧವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಬೈಂದೂರು ತಾಲೂಕು ಕೇಂದ್ರವಾಗಿ ಘೋಷಣೆಯಾದ ಬಳಿಕ ಇಲ್ಲಿಗೆ ಅವಶ್ಯಕತೆ ಯಿರುವ ಮೂಲಭೂತ ಸೌಕರ್ಯ ಗಳನ್ನು ಒದಗಿಸುವುದು ಪ್ರಮುಖ ಜವಾಬ್ದಾರಿಯಾಗಿದೆ. ಡಬ್ಬಲ್ ಇಂಜಿನ್ ಸರಕಾರದ ಆಡಳಿತಾವಧಿಯಲ್ಲಿ ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಎಂದೂ ಕಾಣದ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.

ಮೂರು ಲಕ್ಷ ಮನೆಗಳಿಗೆ ನೀರು ಕೊಡುವ ಚಿಂತನೆಯಲ್ಲಿ ಕೆಲಸ ಮಾಡಿ ದ್ದೇವೆ. 785 ಕೋಟಿ ರೂ. ವೆಚ್ಚದಲ್ಲಿ ವಾರಾಹಿ ನೀರಾವರಿ ಯೋಜನೆ ಮೂಲಕ 43 ಗ್ರಾಪಂ ವ್ಯಾಪ್ತಿಯ ಮನೆಗಳಿಗೆ ನೀರಿನ ಪೂರೈಕೆ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೆಂದೂ ಕಾಣದ ಪ್ರಗತಿ ಕಂಡಿದೆ. ಆದರೆ ಕ್ಷೇತ್ರದಲ್ಲಿ ನಡೆಯುವ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಪೂರ್ವಾಗ್ರಹ ಪೀಡಿತರಾಗಿ ಅಡ್ಡಗಾಲು ಹಾಕುವ ಕೆಲ ಸ್ತಾಪಿತ ಹಿತಾಸಕ್ತಿಗಳು, ಕೆಲವು ಅಧಿಕಾರಿಗಳ ಕಾರ್ಯಕ್ಕೆ ಕಡಿವಾಣ ಹಾಕಬೇಕಿದೆ ಎಂದರು.

ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ., ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ.ಹಾಕೆ, ಮೈಸೂರು ಇಲೆಕ್ಟ್ರಿಕಲ್ ನಿಗಮದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಯೋಜನಾ ಆಯೋಗದ ನಾಮ ನಿರ್ದೇಶಿತ ಸದಸ್ಯೆ ಪ್ರಿಯದರ್ಶಿನಿ ದೇವಾಡಿಗ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಲೂಕು ಆಡಳಿತದ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಸುಜಯ್ ಕುಮಾರ್ ಶೆಟ್ಟಿ, ಕೆ.ಎಂ.ಹರೀಶ್ ಕುಮಾರ್, ಸಹಾಯಕ ಕಾರ್ಯ ಪಾಲಕ ಅಭಿಯಂತರೆ ಎಂ.ಸಹನ ಹಾಗೂ ಕರ್ನಾಟಕ ಗೃಹ ಮಂಡಳಿ ಸಮನ್ವಯ ಅಭಿಯಂತರೆ ಸಿ.ಕೆ.ಮಂಜುಳಾ ಅವರನ್ನು ಸಮ್ಮಾನಿಸಲಾಯಿತು. ಅರ್ಹ ಫಲಾನುಭವಿ ಗಳಿಗೆ 94ಸಿ ಹಕ್ಕುಪತ್ರ ವಿತರಿಸಲಾಯಿತು.

ಬೈಂದೂರು ತಹಶಿಲ್ದಾರ್ ಶ್ರೀಕಾಂತ ಹೆಗ್ಡೆ ಸ್ವಾಗತಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಹಾಗೂ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರೂಪಿಸಿ ದರು. ಸುಬ್ರಹ್ಮಣ್ಯ ಜಿ.ಉಪ್ಪುಂದ ವಂದಿಸಿದರು.

ಸಂಸದರ ಕಡೆಗಣನೆ ಆರೋಪ: ಆಕ್ರೋಶ

ಬೈಂದೂರಿನಲ್ಲಿ ಆಡಳಿತ ಸೌಧ ಉದ್ಘಾಟನಾ ಸಮಾರಂಭದ ಸಭಾ ವೇದಿಕೆಯ ಬ್ಯಾನರ್‌ನಲ್ಲಿ ಸಂಸದರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಸಂಸದ ಬಿವೈ ರಾಘವೇಂದ್ರ ಅಭಿಮಾನಿಗಳು ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.

ಕಾರ್ಯಕ್ರಮದ ಬ್ಯಾನರ್‌ನಲ್ಲಿ ಮೇಲ್ಭಾಗದಲ್ಲಿ ಮುಖ್ಯಮಂತ್ರಿಯಾದಿಯಾಗಿ, ಸಂಸದ ಬಿ.ವೈ.ರಾಘವೇಂದ್ರ ಸಹಿತ ಹಲವರ ಫೋಟೋ ಚಿಕ್ಕದಾಗಿ ಹಾಕಲಾಗಿದ್ದು, ಕೆಳಗಡೆ ಸಚಿವ ಎಸ್.ಅಂಗಾರ ಹಾಗೂ ಶಾಸಕ ಸುಕುಮಾರ್ ಶೆಟ್ಟಿಯವರ ಫೋಟೊ ದೊಡ್ಡದಾಗಿ ಹಾಕಲಾಗಿತ್ತು. ಇದನ್ನು ಗಮನಿಸಿದ ಸಂಸದರ ಅಭಿಮಾನಿಗಳು ಹಾಗೂ ಕೆಲ ಕಾರ್ಯಕರ್ತರು ಶಾಸಕ ಸುಕುಮಾರ್ ಶೆಟ್ಟಿ ಹಾಗೂ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದರು.

ಸಭೆಯಲ್ಲೇ ಸಂದರಿಗೆ ಜೈಕಾರ ಹಾಕಿದ ಪ್ರಸಂಗವೂ ನಡೆದಿದ್ದು ಇದೇ ವೇಳೆ ಸಂಸದರ ಪೋಟೋ ಇರುವ ಕಟೌಟ್ ಒಂದನ್ನು ತಂದು ನಿಲ್ಲಿಸಲಾಯಿತು. ಬಳಿಕ ಸಂಸದರು ಮಧ್ಯಪ್ರವೇಶಿಸಿ ಸರಕಾರಿ ಕಾರ್ಯಕ್ರಮದಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ಸರಿಯಲ್ಲ ಎಂದು ಸ್ವತಃ ಸಂಸದರೇ ಕಟೌಟನ್ನು ತೆರವುಗೊಳಿಸಿ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆದರು.

Similar News