ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಅಧಿಕಾರಿಗಳಿಗೆ ಡಿಸಿ ಕೂರ್ಮಾರಾವ್ ಸೂಚನೆ

Update: 2023-03-15 15:44 GMT

ಉಡುಪಿ:  ಬೇಸಿಗೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿಗೆ ಕೊರತೆಯಾಗ ದಂತೆ ಎಲ್ಲಾ ರೀತಿಯ ಎಚ್ಚರಿಕೆ ವಹಿಸುವಂತೆ, ಎಲ್ಲಾದರೂ  ಸಮಸ್ಯೆಯಾದರೆ ತಕ್ಷಣ ಅವುಗಳನ್ನು ಪರಿಹರಿಸು ವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಜಿಲ್ಲೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ  ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. 

ಸಾಮಾನ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ಎಪ್ರಿಲ್ ಹಾಗೂ  ಮೇ ತಿಂಗಳಲ್ಲಿ  ನೀರಿನ ಸಮಸ್ಯೆಗಳು ಉಂಟಾಗುತ್ತವೆ. ಜಿಲ್ಲೆಯಲ್ಲಿ ಕಳೆದ ಸೆಪ್ಟಂಬರ್‌ನಿಂದ ಈವರೆಗೆ ಹೇಳುವಂತಹ ಮಳೆ ಬೀಳದೆ ಇರುವ ಕಾರಣ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಆದ್ದರಿಂದ ಎಲ್ಲಾ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್‌ಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಕುಡಿಯುವ ನೀರಿನ  ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ  ನೀರಿನ ಸಮಸ್ಯೆ ಯಾದಲ್ಲಿ ಟ್ಯಾಂಕರ್‌ಗಳ ಮೂಲಕ ಜನಸಾಮಾನ್ಯರಿಗೆ ನೀರು ಸರಬರಾಜು ಮಾಡಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿ ಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದ ರೊಂದಿಗೆ, ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬಳಸಬೇಕು ಎಂದ ಅವರು, ಕುಡಿಯುವ ನೀರಿನ ಅವಶ್ಯವಿರುವ ತುರ್ತು ಕಾಮಗಾರಿಗಳನ್ನೂ ಸಹ ಕೈಗೆತ್ತಿಕೊಳ್ಳುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.

ತಾಲೂಕು ಮಟ್ಟದಲ್ಲಿಯೂ ಸಹ ತಹಶೀಲ್ದಾರ್ ನೇತೃತ್ವದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ಟಾಸ್ಕ್ ಪೋರ್ಸ್ ಸಮಿತಿ ಪ್ರತೀ ಶುಕ್ರವಾರ ಸಭೆ ನಡೆಸುವದರೊಂದಿಗೆ ಸ್ಥಳೀಯ ನೀರಿನ ಸಮಸ್ಯೆ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಸಾರ್ವಜನಿಕರು ಬೇಸಿಗೆ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸಬೇಕು. ಅದೇ ರೀತಿ ರೈತರೂ ಸಹ ನೀರು ಅನಗತ್ಯ ವ್ಯರ್ಥವಾಗದಂತೆ ನೋಡಿ ಕೊಳ್ಳಬೇಕು. ಸಾಧ್ಯವಾದಷ್ಟು ತೋಟಗಳಿಗೆ ವಾರಕ್ಕೊಮ್ಮೆ ನೀರು ಹಾಯಿಸಬೇಕು ಎಂದು ಸಲಹೆ ನೀಡಿದರು.

ವಿಪತ್ತು ಪರಿಸ್ಥಿತಿಯ ಬಗ್ಗೆ ಜನಸಾಮಾನ್ಯರಿಗೆ ಎಚ್ಚರಿಕೆ ನೀಡುವ ಡಿಎಂಆರ್ ಟವರ್‌ಗಳನ್ನು ಆಯಕಟ್ಟಿನ ಜಾಗಗಳಲ್ಲಿ ಶೀಘ್ರವಾಗಿ ನಿರ್ಮಿಸಿ ಅವು ಕಾರ್ಯಚಾಲನೆ ಮಾಡಬೇಕು. ಇದರಿಂದಾಗಿ ಜನಸಾಮಾನ್ಯರಿಗೆ ವಿಪತ್ತಿನ ಮುನ್ಸೂಚನೆಗಳನ್ನು ನೀಡಲು ಸಾಧ್ಯವಾಗುವುದರ ಜೊತೆಗೆ ಹೆಚ್ಚಿನ ಸಾವುನೋವುಗಳಾಗದಂತೆ ನೋಡಿಕೊಳ್ಳಬಹುದು ಎಂದರು.

ಶಾಲಾ ಹಂತಗಳಲ್ಲಿಯೂ ವಿಪತ್ತು ನಿರ್ವಹಣೆ ಯೋಜನೆಯನ್ನು ಪ್ರತೀ ಶಾಲೆಯಲ್ಲೂ ಪರಿಷ್ಕರಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಎಲ್ಲಾ ರೀತಿಯ ವಿಪತ್ತಗಳನ್ನು ಎದುರಿಸಲು ಅರಿವು ಮೂಡಿಸಬೇಕು. ಹಾಗೂ ಅವರ ಕುಟುಂಬದವರಿಗೂ ಇದರ ಮಾಹಿತಿ ನೀಡುವಂತೆ ತಿಳಿಸಬೇಕು ಎಂದರು.

ಕಳೆದ ಸಾಲಿನಲ್ಲಿ ಮಳೆ ಹಾನಿಯಿಂದ ಉಂಟಾದ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಹಾನಿಗಳ ದುರಸ್ತಿ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳುವುದರೊಂದಿಗೆ ಪೂರ್ಣಗೊಳಿಸ ಬೇಕೆಂದು ಸೂಚನೆ ನೀಡಿದರು.

ಹವಾಮಾನ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಉಂಟಾಗುವ ವಿಕೋಪ ಮುನ್ಸೂಚನೆಗಳನ್ನು ಸಾರ್ವಜನಿಕರಿಗೆ ಶೀಘ್ರದಲ್ಲಿಯೇ ತಲುಪಿಸುವುದರ ಜೊತೆಗೆ ಅವುಗಳನ್ನು ಎದುರಿಸುವ ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಹ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಸಿಇಓ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾದಿಕಾರಿ ವೀಣಾ ಬಿ.ಎನ್. ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Similar News