2030ರಿಂದ ಇಸ್ರೋ ಬಾಹ್ಯಾಕಾಶ ಪ್ರವಾಸ ಯೋಜನೆ: ಟಿಕೆಟ್ ದರ ಆರು ಕೋಟಿ ರೂಪಾಯಿ !

Update: 2023-03-16 02:36 GMT

ಬೆಂಗಳೂರು: ಎಲ್ಲವೂ ಸುಸೂತ್ರವಾಗಿ ಸಾಗಿದರೆ ಕೈತುಂಬಾ ಹಣ ಇರುವವರು ಬಾಹ್ಯಾಕಾಶ ಸೂಟ್‌ಗಳನ್ನು ಧರಿಸಿ ರಾಕೆಟ್ ಮಾಡ್ಯುಲ್ ತುದಿಯಲ್ಲಿ ಕುಳಿತು ಬಾಹ್ಯಾಕಾಶಕ್ಕೆ ಪ್ರವಾಸ ಕೈಗೊಳ್ಳಬಹುದಾಗಿದೆ. ದರ ಕೇವಲ ಆರು ಕೋಟಿ ರೂಪಾಯಿ!

ಸರ್ಕಾರದ ಬಾಹ್ಯಾಕಶ ಪ್ರವಾಸ ಯೋಜನೆ ವೇಗ ಪಡೆದಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ "ಸ್ಪರ್ಧಾತ್ಮಕ ಬೆಲೆ"ಗೆ ಭಾರತ ಟಿಕೆಟ್ ದರ ನಿಗದಿಪಡಿಸಿದೆ ಎಂದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಹಿರಿಯ ಅಧಿಕಾರಿಯೊಬ್ಬರು ಪ್ರಕಟಿಸಿದ್ದಾರೆ.

ಪ್ರತಿ ಬಾಹ್ಯಾಕಾಶ ಪ್ರವಾಸದ ಟಿಕೆಟ್ ಬೆಲೆ ಸುಮಾರು ಆರು ಕೋಟಿ ರೂಪಾಯಿಗಳೆಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಪ್ರವಾಸಕ್ಕೆ ವಿಧಿಸಲಾಗುತ್ತಿರುವ ದರಕ್ಕೆ ಸಮಾನ ದರ ನಿಗದಿಪಡಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುರಕ್ಷಿತ ಮತ್ತು ಮರು ಬಳಕೆ ಮಾಡಬಹುದಾದ ಬಾಹ್ಯಾಕಾಶ ಪ್ರವಾಸೋದ್ಯಮ ಮಾಡ್ಯೂಲ್‌ನ ಸುತ್ತ ಕಾರ್ಯ ಪ್ರಗತಿಯಲ್ಲಿದೆ. ಟಿಕೆಟ್ ದರ ಸುಮಾರು ಆರು ಕೋಟಿ ರೂಪಾಯಿ ಇರಲಿದೆ. ಈ ಪ್ರವಾಸ ಕೈಗೊಂಡವರು ಕೂಡಾ ಬಾಹ್ಯಾಕಾಶ ಯಾನಿಗಳು ಎಂದು ಹೇಳಿಕೊಳ್ಳಬಹುದು" ಎಂದು ಸೋಮನಾಥ್ ವಿವರ ನೀಡಿದರು.

ಈ ಪ್ರವಾಸದಲ್ಲಿ ಉಪ ಕಕ್ಷೆಗೆ (ಸುಮಾರು 100 ಕಿಲೋಮೀಟರ್ ಎತ್ತರದ ಬಾಹ್ಯಾಕಾಶದ ಅಂಚು) ಅಥವಾ ಕಕ್ಷೆಗೆ (400 ಕಿಲೋಮೀಟರ್) ಕರೆದೊಯ್ಯಲಾಗುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ನಿಗದಿಪಡಿಸಿರುವ ಬೆಲೆಯನ್ನು ನೋಡಿದರೆ ಉಪಕಕ್ಷೆಗೆ ಕರೆದೊಯ್ಯಲಾಗುತ್ತದೆ ಎನಿಸುತ್ತದೆ. ಇಂಥ ಪ್ರವಾಸದಲ್ಲಿ ಪ್ರವಾಸಿಗಳು ಬಾಹ್ಯಾಕಾಶದ ಅಂಚಿನಲ್ಲಿ 15 ನಿಮಿಷ ಕಳೆಯಲಿದ್ದಾರೆ ಹಾಗೂ ಕಡಿಮೆ ಗುರುತ್ವಾಕರ್ಷಣೆ ವಾತಾವರಣದ ಅನುಭವ ಪಡೆಯಲಿದ್ದಾರೆ. ಮರುಬಳಕೆ ರಾಕೆಟ್‌ನಲ್ಲಿ ಯಾನ ಕೈಗೊಳ್ಳಲಾಗುತ್ತದೆ. ಇದು ಮಿತ ವೆಚ್ಚಕ್ಕೆ ಕಾರಣವಾಗಲಿದೆ.

Similar News