ಅಸ್ಸಾಂನಲ್ಲಿನ ಬಾಲ್ಯ ವಿವಾಹ ವಿರುದ್ಧದ ಕಾರ್ಯಾಚರಣೆ ಧರ್ಮಾತೀತವಾಗಿದೆ: ಹಿಮಂತ ಬಿಸ್ವ ಶರ್ಮ

Update: 2023-03-16 09:16 GMT

ಗುವಾಹಟಿ: ಅಸ್ಸಾಂನಲ್ಲಿನ ಬಾಲ್ಯ ವಿವಾಹ ವಿರುದ್ಧದ ಕಾರ್ಯಾಚರಣೆಯು ಧರ್ಮಾತೀತವಾಗಿದ್ದು, ಬಂಧಿತರಾಗಿರುವ ಹಿಂದೂ, ಮುಸ್ಲಿಂ ವ್ಯಕ್ತಿಗಳ ಅನುಪಾತ ಹೆಚ್ಚೂಕಮ್ಮಿ ಸಮಾನವಾಗಿದೆ. ಅನುಪಾತವು 45:55 ರಷ್ಟಿದೆ ಎಂದು ಬುಧವಾರ ಅಸ್ಸಾಂ ಮುಖ್ಯಮಂತ್ರಿ ಹಿಂಮತ ಬಿಸ್ವ ಶರ್ಮ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

ಅಸ್ಸಾಂ ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂತಹ ಕಾರ್ಯಾಚರಣೆಗಳು ಪ್ರತಿ ಆರು ತಿಂಗಳಿಗೊಮ್ಮೆ ನಡೆಯಲಿದ್ದು, ರಾಜ್ಯದಲ್ಲಿ 2026ರ ವೇಳೆಗೆ ಬಾಲ್ಯ ವಿವಾಹವನ್ನು ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 3ರಂದು ಶುರುವಾದ ಕಾರ್ಯಾಚರಣೆಯಲ್ಲಿ ಬಂಧಿತರಾದ ಮುಸ್ಲಿಂ-ಹಿಂದೂ ವ್ಯಕ್ತಿಗಳ ಅನುಪಾತ 55:45ರಷ್ಟಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

"ನೀವೆಲ್ಲ ತಪ್ಪು ತಿಳಿಯುತ್ತೀರಿ ಎಂದು ನಮ್ಮ ಕೆಲವು ವ್ಯಕ್ತಿಗಳನ್ನೂ ವಶಕ್ಕೆ ಪಡೆಯಲಾಯಿತು. ಫೆಬ್ರವರಿ 3ರ ಕಾರ್ಯಾಚರಣೆ ನಂತರ ಬಂಧಿತರಾಗಿರುವ ಮುಸ್ಲಿಂ-ಹಿಂದೂ ಅನುಪಾತ ಶೇ. 55:45ರಷ್ಟಿದೆ" ಎಂದು ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸುವ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನುದ್ದೇಶಿಸಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ಜನರು ಬಂಧಿತ ಅಪರಾಧಿಗಳಿಗಾಗಿ ಅಳುತ್ತಿದ್ದಾರೆಯೇ ಹೊರತು 11 ವರ್ಷದಲ್ಲೇ ಗರ್ಭಿಣಿಯಾಗಿರುವ ಬಾಲಕಿಯರಿಗಲ್ಲ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಐದನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ,  ಸಮಸ್ಯೆಯು ಮುಸ್ಲಿಂ ಬಹುಸಂಖ್ಯಾತರಾಗಿರುವ ಜಿಲ್ಲೆಗಳಾದ ಧುಬ್ರಿ ಹಾಗೂ ಸ್ಲಮರಾಗಳಲ್ಲಿದೆಯೇ  ಹೊರತು, ದಿಬ್ರುಗಢ ಮತ್ತು ಟಿನ್ಸುಕಿಯಾದಲ್ಲಲ್ಲ. ಆದರೆ, ನೀವು ಎಲ್ಲವನ್ನು ಧರ್ಮಾಧಾರಿತ ಮಾಡುವುದರಿಂದ ಅಲ್ಲಿಂದಲೂ ಕೆಲವರನ್ನು ವಶಕ್ಕೆ ಪಡೆಯುವಂತೆ ದಿಬ್ರುಗಢ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ ನಾಲ್ಕನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯಲ್ಲೂ ಕೂಡಾ ಮುಸ್ಲಿಂ ಸಮುದಾಯದ ಬಾಹುಳ್ಯವಿರುವ ಅಸ್ಸಾಂನ ಕೆಳ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದ ಬಾಲ್ಯ ವಿವಾಹ ಮತ್ತು ಮಕ್ಕಳ ಜನನ ಪ್ರಮಾಣವಿತ್ತು" ಎಂದು ಶರ್ಮ ಹೇಳಿದ್ದಾರೆ.

ಆದರೆ, ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಸರ್ಕಾರವು ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ಹಾಗೂ ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಣೆ ಕಾಯ್ದೆ, 2012 ಅನ್ನು ಆರೋಪಿಗಳ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಭಟಿಸಿದ್ದವು. ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಶಾಸಕ ಅಬ್ದುರ್ ಬಷೀರ್ ಮಂಡಲ್, "ಈ ಎರಡು ಕಾಯ್ದೆಗಳನ್ನು ಬಳಸಿಕೊಂಡು ಅಸ್ಸಾಂ ಸರ್ಕಾರವು ಜನರನ್ನು ಭೀತರನ್ನಾಗಿಸುತ್ತಿದೆ" ಎಂದು ಸದನದಲ್ಲಿ ಆರೋಪಿಸಿದ್ದರು.

Similar News