ಕಾನೂನು ಬಾಹಿರ ವಿಚಾರಣಾ ಪ್ರಕ್ರಿಯೆ: ಸಿಬಿಐಗೆ ನ್ಯಾಯಾಲಯ ತರಾಟೆ

Update: 2023-03-17 05:57 GMT

ಕೊಲ್ಕತ್ತಾ: ಅಕ್ರಮ ಶಾಲಾ ನೇಮಕಾತಿ ಪ್ರಕರಣದಲ್ಲಿ ಸಿಬಿಐ ಕೈಗೊಂಡ ತನಿಖಾ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಸಿಬಿಐ ನ್ಯಾಯಾಲಯ, ಸಿಬಿಐ ಕ್ರಮ ಕಾನೂನಿನ ಅನುಸಾರವಾಗಿಲ್ಲ ಮತ್ತು ಇಂಥ ಕ್ರಮ ಮೇಲಧಿಕಾರಿಗಳಿಗೆ ಮಾಹಿತಿ ನೀಡುವುದು ಅನಿವಾರ್ಯವಾಗುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಮಧ್ಯವರ್ತಿ ಸುಬ್ರತಾ ಸಮಂತಾ ರಾಯ್ ಎಂಬಾತನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಬಳಿಕ ಆತನನ್ನು ಸಿಬಿಐ ಬಂಧಿಸಿದೆ ಎಂದು ಆಕ್ಷೇಪಿಸಿದ ನ್ಯಾಯಾಧೀಶ ಅರ್ಪಣ್ ಚಟರ್ಜಿ ಅವರು, ಈಗಾಗಲೇ ಜೈಲಿನಲ್ಲಿರುವ ಪಶ್ಚಿಮ ಬಂಗಾಳ ಶಾಲಾ ಸೇವೆಗಳ ಆಯೋಗ (ಎಸ್‌ಎಸ್‌ಸಿ) ಮಾಜಿ ಸಲಹೆಗಾರ ಎಸ್.ಪಿ.ಸಿನ್ಹಾ ಅವರ ಉಲ್ಲೇಖ ಆರೋಪಪಟ್ಟಿಯಲ್ಲಿ ಇಲ್ಲದಿರುವುದು ಆಶ್ಚರ್ಯಕರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿನ್ಹಾ ಅವರನ್ನು ಕಸ್ಟಡಿ ವಿಚಾರಣೆಗೆ ಗುರಿಪಡಿಸಲು ಸಿಬಿಐ ನ್ಯಾಯಾಲಯಕ್ಕೆ ಮನವಿಯನ್ನೂ ಸಲ್ಲಿಸಿಲ್ಲ ಎಂದು ರಾಯ್ ಅವರ ವಕೀಲ ಬಿಪ್ಲವ್ ಗೋಸ್ವಾಮಿ ಗಮನಕ್ಕೆ ತಂದರು.

ಸಿನ್ಹಾ ಅವರ ಕೈಬರಹದ ಮಾದರಿಯನ್ನು ಸಂಗ್ರಹಿಸಲು ತನಿಖಾ ಸಂಸ್ಥೆ ನ್ಯಾಯಾಲಯದ ಅನುಮತಿ ಕೋರಿದಾಗ, "ಅವರ ಚಲನ ವಲನಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಅವರನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿಲ್ಲ ಎಂದಾದ ಮೇಲೆ ಅವರ ಕೈಬರಹದ ಮಾದರಿಗೆ ಬೇಡಿಕೆ ಸಲ್ಲಿಸಲು ಹೇಗೆ ಸಾಧ್ಯ" ಎಂದು ವಕೀಲ ಸಂಜಯ್ ದಾಸ್‌ಗುಪ್ತಾ ಆಕ್ಷೇಪ ಸಲ್ಲಿಸಿದರು.

ಈ ಹಂತದಲ್ಲಿ ಸಿಬಿಐನ ತನಿಖಾ ಪ್ರಕ್ರಿಯೆಯ ಬಗ್ಗೆ ನ್ಯಾಯಾಧೀಶರು ಪ್ರಶ್ನಿಸಿದರು. ಸಿನ್ಹಾ ಅವರಿಂದ ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ದಾಖಲೆಗಳನ್ನು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆಯೇ ಎಂದು ಕೇಳಿದರು. ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿಯವರು ಮಾತನಾಡಲು 5 ನಿಮಿಷಗಳ ಅವಕಾಶ ಕೋರಿದಾಗ, ಅವರ ವಿಚಾರಣೆಯನ್ನು ಮಾರ್ಚ್ 23ಕ್ಕೆ ನ್ಯಾಯಾಧೀಶರು ಮುಂದೂಡಿದರು.

Similar News