×
Ad

ಆಸ್ಟ್ರೇಲಿಯಾದಲ್ಲಿ 'ಬಿಜೆಪಿಯ ಸಂಘಟಕ' ಬಾಲೇಶ್ ಧನ್ಕರ್ ಅತ್ಯಾಚಾರ ಪ್ರಕರಣದಲ್ಲಿ ಬಂಧನ

Update: 2023-03-17 11:55 IST

ಹೊಸದಿಲ್ಲಿ:‌ ಬಿಜೆಪಿ (BJP) ಕಾರ್ಯಕರ್ತ ಹಾಗೂ ಆಸ್ಟ್ರೇಲಿಯಾದಲ್ಲಿರುವ (Australia) ಓವರ್‌ಸೀಸ್‌ ಫ್ರೆಂಡ್ಸ್‌ ಆಫ್‌ ಬಿಜೆಪಿ ಇದರ ಸ್ಥಾಪಕ ಅಧ್ಯಕ್ಷ ಬಾಲೇಶ್‌ ಧನ್ಕರ್‌ (Balesh Dhankhar) ಎಂಬಾತನನ್ನು ಅತ್ಯಾಚಾರ ಆರೋಪದಲ್ಲಿ ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈತ ಓವರ್ಸಿಸ್ ಫ್ರೆಂಡ್ಸ್ ಆಫ್ ಬಿಜೆಪಿ ಆಸ್ಟ್ರೇಲಿಯಾದ ಅಧ್ಯಕ್ಷನಾಗಿದ್ದ ಹಾಗು 2014 ರಲ್ಲಿ ಪ್ರಧಾನಿ ಮೋದಿ ಆಸ್ಟ್ರೇಲಿಯಾ ಭೇಟಿ ವೇಳೆ ಅವರನ್ನು ಸ್ವಾಗತಿಸುವ ಹಾಗು ಅಲ್ಲಿ ಅವರಿಗಾಗಿ ಭಾರತೀಯ ಸಮುದಾಯದ ಕಾರ್ಯಕ್ರಮ ಆಯೋಜಿಸುವ ಮುಖ್ಯ ಸಂಘಕನಾಗಿದ್ದ ಎಂದು ಹೇಳಲಾಗುತ್ತಿದೆ. ಈತ 2017 ರಲ್ಲಿ ಗುಜರಾತ್ ನಲ್ಲಿ ಬಿಜೆಪಿ ಜಯಭೇರಿ ಬಳಿಕ ಮೋದಿ ಫೋಟೋ ಮುಂದೆ ನಿಂತು  ಬಿಜೆಪಿ ಶಾಲು ಹಾಕಿಕೊಂಡು ಸಿಡ್ನಿಯಲ್ಲಿ ಮಾಧ್ಯಮಗಳಿಗೆ  ಸಂದರ್ಶನ ನೀಡುವ ವೀಡಿಯೊ ಹಾಗು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲಿನ ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾದಲ್ಲೂ ಈತ ಸಕ್ರಿಯನಾಗಿದ್ದ ಎಂದು ವರದಿಯಾಗಿದೆ. 

ಈ ಬಗ್ಗೆ ಹಲವು ಸಾಮಾಜಿಕ ಕಾರ್ಯಕರ್ತರು, ತಜ್ಞರು, ಸಂಘಟನೆಗಳು ಟ್ವೀಟ್ ಮಾಡಿವೆ.

ಈತನ ವಿರುದ್ಧ 13 ಅತ್ಯಾಚಾರ ಪ್ರಕರಣಗಳು, ಖಾಸಗಿ ವೀಡಿಯೋಗಳನ್ನು ಅನುಮತಿಯಿಲ್ಲದೆ ರೆಕಾರ್ಡ್‌ ಮಾಡಿದ 17 ಪ್ರಕರಣಗಳು, ಅಪರಾಧವೆಸಗಲು ಅಮಲುಭರಿತ ವಸ್ತುಗಳನ್ನು ಬಳಸಿದ ಆರೋಪಗಳು ಇವೆ.

ಆಸ್ಟ್ರೇಲಿಯಾದ ಹಿಂದೂ ಕೌನ್ಸಿಲ್‌ ಪರವಾಗಿ ಆತ ಅನೇಕ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ್ದನಲ್ಲದೆ, 2015 ರಲ್ಲಿ ಸಿಡ್ನಿ ವಿಶ್ವವಿದ್ಯಾಲಯ ಮತ್ತು ಸಿಡ್ನಿ ಹಾರ್ಬರ್‌ ಬ್ರಿಡ್ಜ್‌ ಕ್ಲೈಂಬ್‌ ಆಯೋಜಿಸಿದ್ದ ಅಂತರ-ಧರ್ಮೀಯ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದ.

ಪೊಲೀಸರ ಪ್ರಕಾರ ಈತ ಅಲಾರಂ ಕ್ಲಾಕ್‌ ಒಳಗಿನ  ಕ್ಯಾಮರಾ ಬಳಸಿಕೊಂಡು ಐದು ಮಹಿಳೆಯರ ಮೇಲೆ ಎಸಗಿದ ಅತ್ಯಾಚಾರಗಳನ್ನು ರೆಕಾರ್ಡ್‌  ಮಾಡಿಕೊಂಡಿದ್ದ ಹಾಗೂ ಈ ಸಂತ್ರಸ್ತೆಯರಿಗೆ ನಕಲಿ ಉದ್ಯೋಗ ಸಂದರ್ಶನಗಳ ನೆಪದಲ್ಲಿ ಹಿಲ್ಟನ್‌ ಹೋಟೆಲ್‌ಗೆ ಕರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್‌ 2014 ರಲ್ಲಿ ಪ್ರಧಾನಿ ಮೋದಿ ಅವರ ರ್ಯಾಲಿ ಸಂಘಟಿಸುವಲ್ಲೂ ಈತ ಪ್ರಮುಖ ಪಾತ್ರ ವಹಿಸಿದ್ದನೆಂದು ಹೇಳಲಾಗಿದೆ.

ಮಂಗಳವಾರ ಈತನ ವಿರುದ್ಧದ ಪ್ರಕರಣದ ವಿಚಾರಣೆ ಆರಂಭಗೊಂಡಿದ್ದು ಈತನಿಗೆ ಕೊರಿಯನ್‌ ಯುವತಿಯರ ಮೇಲೆ ವಿಶೇಷ ಆಸಕ್ತಿಯಿತ್ತು ಹಾಗೂ ಕೊರಿಯನ್-ಇಂಗ್ಲಿಷ್‌ ಭಾಷಿಕರಿಗೆ ಅನುವಾದಕಾರ ಉದ್ಯೋಗ ಕುರಿತು ಗಮ್‌ಟ್ರೀನಲ್ಲಿ ಈತ ಜಾಹೀರಾತುಗಳನ್ನು ಪೋಸ್ಟ್‌ ಮಾಡಿ, ನಂತರ ಅರ್ಜಿ ಸಲ್ಲಿಸಿದವರನ್ನು ಆತನ ಸಿಡ್ನಿ ಅಪಾರ್ಟ್‌ಮೆಂಟ್‌ ಸಮೀಪದಲ್ಲಿದ್ದ ಹಿಲ್ಟನ್‌ ಹೋಟೆಲ್‌ ಬಾರ್‌ಗೆ ಕರೆಸಿ ಭೇಟಿಯಾಗುತ್ತಿದ್ದ, ನಂತರ ಅಮಲುಭರಿತ ವಸ್ತು ನೀಡಿ ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಎಂದು ಆರೋಪಿಸಲಾಗಿದೆ.

ಈತನಿಗೆ ಪ್ರಜ್ಞೆ ತಪ್ಪಿದ ಏಷ್ಯನ್‌ ಮತ್ತು ಕೊರಿಯನ್‌ ಯುವತಿಯರೊಂದಿಗಿನ ದೃಶ್ಯಗಳನ್ನು ಮತ್ತು ವೀಡಿಯೋಗಳನ್ನು ತೆಗೆಯುವ ಚಟವಿತ್ತು ಎಂದು ಪ್ರಾಸಿಕ್ಯೂಟರ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅಚ್ಚರಿಯೆಂದರೆ ಧನ್ಕರ್‌ನ ವಕೀಲೆ ರೆಬೆಕ್ಕಾ ಮಿಚ್ಚೆಲ್‌, ತನ್ನ ಕಕ್ಷಿಗಾರ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದನ್ನು ಅಲ್ಲಗಳೆದಿಲ್ಲ ಹಾಗೂ ಅವರನ್ನು ಜಾಹೀರಾತು ಮೂಲಕ ಭೇಟಿಯಾಗುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ .ಅದೇ ಸಮಯ, ಪ್ರತಿಯೊಬ್ಬ ದೂರುದಾರರು ಲೈಂಗಿಕ ಕ್ರಿಯೆಗಳಿಗೆ ಸಮ್ಮತಿಸಿದ್ದರು ಆದರೆ ಪ್ರಾಸಿಕ್ಯೂಶನ್‌ ಧನ್ಕರ್‌ ಅವರ ಅಪರಾಧವನ್ನು ಸಾಬೀತುಪಡಿಸಬೇಕಿದೆ ಎಂದಿದ್ದಾರೆ.

ಮಹಿಳೆಯರ ಅನುಮತಿಯಿಲ್ಲದೆ ಚಿತ್ರೀಕರಿಸಲಾಗಿದೆ ಎಂಬ ಆರೋಪವನ್ನು ಧನ್ಕರ್‌ ನಿರಾಕರಿಸಿದ್ದಾರಲ್ಲದೆ ಸಂತ್ರಸ್ತೆಯರಿಗೆ ಅಮಲುಭರಿತ ವಸ್ತು ನೀಡಲಾಗಿದೆ ಎಂಬುದನ್ನೂ ಅಲ್ಲಗಳೆದಿದ್ದಾನೆ.

ಆರೋಪಿಯ ಬ್ಯಾಕ್‌ಪ್ಯಾಕ್‌ನಲ್ಲಿ ಆತನ ಲೈಂಗಿಕ ಕ್ರಿಯೆಗಳ 47 ವೀಡಿಯೋಗಳ ಹಾರ್ಡ್‌ ಡ್ರೈವ್‌ ಪತ್ತೆಯಾಗಿದೆ ಎಂದು ಪ್ರಕರಣದ ತನಿಖಾಧಿಕಾರಿ ಸಾರ್ಜಂಟ್‌ ಕತ್ರೀನಾ ಗೈಡ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Similar News