ತನ್ನ ಸಿಬ್ಬಂದಿಗಳಿಗೆ ಮತ್ತೊಮ್ಮೆ ಸ್ವಯಂ ನಿವೃತ್ತಿ ಯೋಜನೆ ಪರಿಚಯಿಸಿದ ಏರ್ ಇಂಡಿಯಾ

Update: 2023-03-17 09:16 GMT

ಹೊಸ ದಿಲ್ಲಿ: ವಿಮಾನ ಹಾರಾಟ ನಡೆಸದ ತನ್ನ ಸಿಬ್ಬಂದಿಗಳಿಗೆ ಏರ್ ಇಂಡಿಯಾ ಸಂಸ್ಥೆಯು ಸ್ವಯಂನಿವೃತ್ತಿ ಯೋಜನೆ ಪರಿಚಯಿಸಿದ್ದು, ಕಳೆದ ವರ್ಷ ಏರ್ ಇಂಡಿಯಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಟಾಟಾ ಸಮೂಹ ಪರಿಚಯಿಸುತ್ತಿರುವ ಎರಡನೆ ಸುತ್ತಿನ ಸ್ವಯಂನಿವೃತ್ತಿ ಯೋಜನೆ ಇದಾಗಿದೆ ಎಂದು thehindu.com ವರದಿ ಮಾಡಿದೆ.

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, ನೂತನ ಯೋಜನೆಯು ಖಾಯಂ ಸಾಮಾನ್ಯ ವರ್ಗದ ಅಧಿಕಾರಿಗಳಿಗೆ ಲಭ್ಯವಿದ್ದು, ಈಗಾಗಲೇ 40 ವರ್ಷ ಪೂರೈಸಿರುವವರು ಅಥವಾ ಅದಕ್ಕೂ ಮೇಲ್ಪಟ್ಟ ವಯಸ್ಸಿನವರು ಮತ್ತು ವಿಮಾನ ಪ್ರಯಾಣ ಸಂಸ್ಥೆಯಲ್ಲಿ ಈಗಾಗಲೇ ನಿರಂತರವಾಗಿ ಐದು ವರ್ಷ ಕಾಲ ಸೇವೆ ಸಲ್ಲಿಸಿರುವವರಿಗೆ ಈ ಅವಕಾಶವಿದೆ ಎಂದು ತಿಳಿಸಿದೆ.

ಈ ಯೋಜನೆಯು ಏಪ್ರಿಲ್ 30ರಿಂದ ಪ್ರಾರಂಭವಾಗಲಿದ್ದು, ಕನಿಷ್ಠ ಐದು ವರ್ಷಗಳ ನಿರಂತರ ಸೇವೆ ಮುಗಿಸಿರುವ ಗುಮಾಸ್ತೆ ಮತ್ತು ಕೌಶಲ್ಯರಹಿತ ವರ್ಗದ ಉದ್ಯೋಗಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಹಾಲಿ ಸ್ವಯಂನಿವೃತ್ತಿ ಯೋಜನೆಯ ಲಾಭ ಪಡೆಯಲು ಒಟ್ಟಾರೆ 2,100 ಮಂದಿ ಉದ್ಯೋಗಿಗಳು ಅರ್ಹರಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಸದ್ಯ ಏರ್ ಇಂಡಿಯಾ ಸಂಸ್ಥೆಯು ವಿಮಾನ ಹಾರಾಟ ನಡೆಸುವ ಹಾಗೂ ಹಾರಾಟ ನಡೆಸದ ಒಟ್ಟು ಸುಮಾರು 11,000 ಸಿಬ್ಬಂದಿಗಳನ್ನು ಹೊಂದಿದೆ.

ಜೂನ್, 2022ರಲ್ಲಿ ಏರ್ ಇಂಡಿಯಾ ಸಂಸ್ಥೆಯು ಮೊದಲ ಸುತ್ತಿನ ಸ್ವಯಂನಿವೃತ್ತಿ ಯೋಜನೆಯನ್ನು ಜಾರಿಗೊಳಿಸಿತ್ತು.

Similar News