×
Ad

ಮಾಂಸ ಪೂರೈಕೆದಾರರಿಗೆ ಹಲ್ಲೆ ನಡೆಸಿ‌ ದರೋಡೆಗೈದ ಮೂವರು ಪೊಲೀಸ್ ಸಿಬ್ಬಂದಿ ಅಮಾನತು

Update: 2023-03-17 19:29 IST

ಹೊಸದಿಲ್ಲಿ, ಮಾ. 17: ಹೊಸದಿಲ್ಲಿಯಲ್ಲಿ ಈ ತಿಂಗಳ ಆರಂಭದಲ್ಲಿ ಇಬ್ಬರು ಮಾಂಸ ಪೂರೈಕೆದಾರರ ಮೇಲೆ ಹಲ್ಲೆ ನಡೆಸಿ ಅವರನ್ನು ದರೋಡೆಗೈದ ಆರೋಪ ಎದರಿಸುತ್ತಿರುವ ಏಳು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ಮೂವರು ಪೊಲೀಸರು.

ಘಟನೆಯು ದಿಲ್ಲಿಯ ಆನಂದ್ ವಿಹಾರ್ನಲ್ಲಿ ಮಾರ್ಚ್ 7ರಂದು ನಡೆದಿತ್ತು. ಅಂದು ಮಾಂಸ ಪೂರೈಕೆದಾರರು ಪ್ರಯಾಣಿಸುತ್ತಿದ್ದ ಕಾರು ಮತ್ತು ಸ್ಕೂಟರೊಂದರ ನಡುವೆ ಅಪಘಾತ ಸಂಭವಿಸಿತ್ತು. ಆಗ ಘಾಝಿಪುರದಲ್ಲಿ ಕಸಾಯಿಖಾನೆ ನಡೆಸುತ್ತಿದ್ದ ಮಾಂಸ ಪೂರೈಕೆದಾರ ನವಾಬ್ ಮತ್ತು ಅವರ ಸೋದರ ಸಂಬಂಧಿ ಶುಐಬ್ ಕಾರಿನಲ್ಲಿದ್ದರು.

‘‘ನಾವು ಮುಸ್ತಾಫಾಬಾದ್ನಲ್ಲಿರುವ ಮನೆಯತ್ತ ತೆರಳುತ್ತಿದ್ದಾಗ, ಆನಂದ ವಿಹಾರ್ನಲ್ಲಿ ಸ್ಕೂಟರೊಂದು ನಮ್ಮ ಕಾರಿಗೆ ಢಿಕ್ಕಿ ಹೊಡೆಯಿತು. ದುರಸ್ತಿಗಾಗಿ 4,000 ರೂ. ಬೇಕು ಎಂದು ಸ್ಕೂಟರ್ ಸವಾರ ಹೇಳಿದರು. ಆಗ ಒಂದು ಪಿಸಿಆರ್ ವ್ಯಾನ್ ಸ್ಥಳಕ್ಕೆ ಬಂತು ಹಾಗೂ ಓರ್ವ ಪೊಲೀಸ್ 2,500 ರೂ. ತೆಗೆದುಕೊಂಡು ಸ್ಕೂಟರ್ ಸವಾರನಿಗೆ ನೀಡಿದರು’’ ಎಂದು ನವಾಬ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

15,000 ರೂ. ಸುಲಿಗೆ, ಹಲ್ಲೆ, ಕೊಲೆ ಬೆದರಿಕೆ ಆರೋಪ

ಸ್ಥಳದಿಂದ ಸ್ಕೂಟರ್ ಸವಾರ ತೆರಳಿದ ಬಳಿಕ, ಪೊಲೀಸ್ ಸಿಬ್ಬಂದಿಯು ನವಾಬ್ ಮತ್ತು ಶುಐಬ್ರಿಂದ 15,000 ರೂ. ಕೇಳಿದರು ಹಾಗೂ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವ ಬೆದರಿಕೆಯೊಡ್ಡಿದರು. ಪೊಲೀಸರು ಅವರಿಬ್ಬರನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಅವರನ್ನು ಕೂಡಿ ಹಾಕಿದರು ಹಾಗೂ ಇತರ ನಾಲ್ವರೊಂದಿಗೆ ಸೇರಿಕೊಂಡು ಹೊಡೆದರು ಎಂದು ಆರೋಪಿಸಲಾಗಿದೆ.

‘‘ಅವರು ಚಾಕುವಿನಿಂದ ನಮ್ಮ ಕೈಗಳನ್ನು ಕತ್ತರಿಸಲು ಪ್ರಯತ್ನಿಸಿದರು. ಅವರು ನಮ್ಮ ಮುಖದ ಮೇಲೆ ಮೂತ್ರ ಮಾಡಿದರು ಮತ್ತು ಕೊಲ್ಲುವ ಬೆದರಿಕೆಯೊಡ್ಡಿದರು. ನಿಮ್ಮ ಹೆಣಗಳನ್ನು ಚರಂಡಿಯಲ್ಲಿ ಬಿಸಾಡುತ್ತೇವೆ ಎಂದರು. ನಾವು ದನಗಳನ್ನು ಕೊಲ್ಲುತ್ತೇವೆ ಎಂದು ಆರೋಪಿಸಿದರು ಹಾಗೂ ನಮ್ಮಿಂದ 25,000 ರೂಪಾಯಿ ಲೂಟಿ ಮಾಡಿದರು’’ ಎಂದು ನವಾಬ್ ಆರೋಪಿಸಿದ್ದಾರೆ.

ತಮ್ಮನ್ನು 2-3 ಗಂಟೆಗಳ ಕಾಲ ಕೂಡಿಹಾಕಲಾಗಿತ್ತು ಹಾಗೂ ಕೆಲವು ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ಬಲವಂತಪಡಿಸಲಾಗಿತ್ತು ಎಂದು ಅವರು ದೂರಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 10ರಂದು ಮೊದಲ ಮಾಹಿತಿ ವರದಿ ದಾಖಲಾಗಿದೆ.

ಸುಲಿಗೆ ಮತ್ತು ಉದ್ದೇಶಪೂರ್ವಕವಾಗಿ ಗಾಯಗೊಳಿಸಿರುವುದಕ್ಕಾಗಿ ಮೂವರು ಪೊಲೀಸರು ಸೇರಿದಂತೆ ಏಳು ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

Similar News