ಕಾಂಗ್ರೆಸ್ ಇಲ್ಲದೆ ನೂತನ ರಂಗ ಕಟ್ಟಲು ಅಖಿಲೇಶ್, ಮಮತಾ ಸಜ್ಜು

Update: 2023-03-17 14:58 GMT

ಕೋಲ್ಕತ್ತಾ: ಕೇಂದ್ರದ ಮೂರು ಪ್ರಮುಖ ವಿರೋಧ ಪಕ್ಷಗಳು ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಸಮಾನ ಅಂತರದಲ್ಲಿ ಇಡಲು ಒಪ್ಪಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿಯನ್ನು ಸಮಾನವಾಗಿ ಪರಿಗಣಿಸುವ ನೀತಿಯನ್ನು ಅನುಸರಿಸುವುದಾಗಿ ಸೂಚಿಸಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಇಂದು ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬ್ಯಾನರ್ಜಿ ಅವರು ಮುಂದಿನ ವಾರ ಬಿಜು ಜನತಾ ದಳದ ಮುಖ್ಯಸ್ಥರಾಗಿರುವ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಇದೇ ವಿಚಾರವಾಗಿ ಭೇಟಿಯಾಗಲಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷಗಳ ಗುಂಪಿನ ಪ್ರಮುಖ ನಾಯಕ ಎಂದು ಬಿಂಬಿಸುವ ಬಿಜೆಪಿಯ ಪ್ರಯತ್ನವನ್ನು ಎದುರಿಸಲು ಈ ತಂತ್ರ ಹೂಡಲಾಗಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ಲಂಡನ್‌ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿದಕ್ಕಾಗಿ ಬಿಜೆಪಿ ರಾಹುಲ್‌ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಿದೆ. ಸಂಸತ್ತಿನಲ್ಲಿ ಹಾಗೂ ಸಂಸತ್ತಿನ ಹೊರಗೆ ರಾಹುಲ್‌ ಗಾಂಧಿ ಕ್ಷಮೆಯಾಚಿಸಬೇಕೆಂದೂ ಬಿಜೆಪಿ ಆಗ್ರಹಿಸಿದೆ. ಸದ್ಯ, ವಿರೋಧ ಪಕ್ಷಗಳು ರಾಹುಲ್‌ ಗಾಂಧಿಯನ್ನು ಬಳಸಿ ನಮ್ಮನ್ನು ಗುರಿ ಮಾಡಲಾಗುತ್ತಿದೆ ಎಂದು ಇತರೆ ವಿರೋಧ ಪಕ್ಷಗಳು ಭಾವಿಸಿದ್ದು, ಕಾಂಗ್ರೆಸ್‌ ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ.

"ರಾಹುಲ್ ಗಾಂಧಿ ವಿದೇಶದಲ್ಲಿ ಮಾಡಿದ ಹೇಳಿಕೆ ಬಗ್ಗೆ ಅವರು ಕ್ಷಮೆಯಾಚಿಸುವವರೆಗೂ ಬಿಜೆಪಿ ಸಂಸತ್ತಿಗೆ ಅವಕಾಶ ನೀಡುವುದಿಲ್ಲ. ಇದರರ್ಥ ಅವರು ಕಾಂಗ್ರೆಸ್ ಅನ್ನು ಬಳಸಿಕೊಂಡು ಸಂಸತ್ತು ಕಾರ್ಯನಿರ್ವಹಿಸುವುದನ್ನು ತಡೆಯುತ್ತಿದ್ದಾರೆ. ರಾಹುಲ್ ಗಾಂಧಿ (ವಿರೋಧ ಪಕ್ಷದ) ಮುಖವಾಗಬೇಕೆಂದು ಬಿಜೆಪಿ ಬಯಸುತ್ತದೆ” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ NDTV ಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷಗಳ "ಬಿಗ್ ಬಾಸ್" ಎಂದು ಭಾವಿಸುವುದು ತಪ್ಪು ಎಂದು ಬಂಡೋಪಾಧ್ಯಾಯ ಹೇಳಿದ್ದಾರೆ.

"ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾರ್ಚ್ 23 ರಂದು ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗಲಿದ್ದಾರೆ. ನಾವು ಇದನ್ನು (ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳುವ ಯೋಜನೆ) ಇತರ ವಿರೋಧ ಪಕ್ಷಗಳೊಂದಿಗೆ ಚರ್ಚಿಸುತ್ತೇವೆ. ಇದು ಮೂರನೇ ರಂಗ ಎಂದು ನಾವು ಹೇಳುತ್ತಿಲ್ಲ, ಆದರೆ ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿಯನ್ನು ಎದುರಿಸುವ  ಶಕ್ತಿ ಇದೆ." ಬಂಡೋಪಾಧ್ಯಾಯ ಹೇಳಿದರು.

ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳಲು ಬಯಸುತ್ತಾರೆ ಎಂದು ಅವರು ಖಚಿತಪಡಿಸಿದ್ದಾರೆ.

Similar News